ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
34 ವರ್ಷದ ಎಲ್.ರವೀಶ್ ಚಾಕು ಇರಿತಕ್ಕೊಳಗಾದ ಯುವಕ. ಈತ ತಾಲೂಕಿನ ಕುಣಗಳ್ಳಿ ನಿವಾಸಿ. ಅದೃಷ್ಟವಶಾತ್ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರವೀಶ್ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳೊಂದಿಗೆ ಮದುವೆ ನಿಶ್ಚಯವಾಗಿತ್ತು. ಜ.30 ರಂದು ವೆಂಕಟೇಶ್ವರ ಮಹಲ್ನಲ್ಲಿ ಆರತಕ್ಷತೆ ನಡೆಯಬೇಕಾಗಿತ್ತು.
ಸುದ್ದಿಯ ಪ್ರಕಾರ, ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ರವೀಶ್ ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿ, “6 ತಿಂಗಳ ಹಿಂದೆಯಷ್ಟೇ ನನ್ನ ಎಂಗೇಜ್ಮೆಂಟ್ ನಿಶ್ಚಿತವಾಯಿತು. ಆರತಕ್ಷತೆಗೆ ತೆರಳುವಾಗ ಹಿಂಬದಿಯಿಂದ ಬಂದ ಕಾರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಯಾರಿದ್ದಾರೆ ಎಂಬುದು ತಿಳಿಯುತ್ತಿಲ್ಲ” ಎಂದು ಹೇಳಿದರು. ಘಟನೆ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



