ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾ ಹಾಗೂ ಸಮಾಜದ ನಡುವಿನ ಸಂಬಂಧದ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆ ಸಿದ್ಧಪಡಿಸಿದರು. ಈ ಬಾರಿ 70 ದೇಶಗಳ 240ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ನಡೆಯಲಿದೆ ಎಂದು ಅವರು ಘೋಷಿಸಿದರು.
ಚಿತ್ರೋತ್ಸವದ ರಾಯಭಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡ ಸಿಎಂ, “ಅವರು ಕೇವಲ ನಟರಲ್ಲ, ಸಾಮಾಜಿಕ ಹೋರಾಟಗಾರರೂ ಹೌದು. ಸಿನಿಮಾ ಮತ್ತು ಸಮಾಜದ ನಡುವಿನ ಸೇತುವೆಯಾಗುವ ಸಾಮರ್ಥ್ಯ ಅವರಿಗೆ ಇದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಸಿನಿಮಾ ಮನರಂಜನೆಯಷ್ಟೇ ಅಲ್ಲ, ಸಮಾಜದಲ್ಲಿರುವ ಅಸಮಾನತೆ, ಬಡತನ ಮತ್ತು ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿ ಹೊಂದಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬದುಕಿನ ವಾಸ್ತವ ಚಿತ್ರಣ ಸಿನಿಮಾಗಳ ಮೂಲಕ ಜಗತ್ತಿನ ಮುಂದೆ ಬರಬೇಕು ಎಂದು ಒತ್ತಾಯಿಸಿದರು. ಈ ಜವಾಬ್ದಾರಿಯನ್ನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ನಿರ್ವಹಿಸಿದ್ದನ್ನು ಅವರು ಸ್ಮರಿಸಿದರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಉದ್ದೇಶ ಕೇವಲ ಸಿನಿಮಾ ಪ್ರದರ್ಶನವಲ್ಲ. ಬೇರೆ ದೇಶಗಳ ಸಮಾಜ, ರಾಜಕೀಯ, ಸಂಸ್ಕೃತಿ ಹಾಗೂ ಮಾನವ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೇ ಅದರ ಆತ್ಮ ಎಂದು ಸಿಎಂ ಅಭಿಪ್ರಾಯಪಟ್ಟರು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಯ ವಸ್ತುಗಳಾಗಿಬಿಡುತ್ತವೆ ಎಂದು ಎಚ್ಚರಿಸಿದರು.
ಪ್ರತಿ ವ್ಯಕ್ತಿಯನ್ನು ಪ್ರೀತಿ ಮತ್ತು ಸ್ನೇಹದಿಂದ ನೋಡುವ ಮನೋಭಾವ ಬೆಳೆದರೆ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿಯನ್ನು ಸಿನಿಮಾ ಮಾಧ್ಯಮ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕನ್ನಡ ಸಿನಿಮಾರಂಗದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಸಿಎಂ, ಸಮಾಜವನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸಿದರು. “ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ” ಎಂಬ ಘೋಷಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.



