ರಾಯಚೂರು: ಚಿಕ್ಕ ಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆ ರೇಖಾಳನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಕೇವಲ ಕೌಟುಂಬಿಕ ಕಲಹವಲ್ಲ, ಆಸ್ತಿ ಲಾಲಸೆ ಮತ್ತು ಅಮಾನುಷ ಮನೋಭಾವವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ.
ಆರೋಪಿ ಸಿದ್ದಪ್ಪ ತನ್ನ ಸೊಸೆ ರೇಖಾ ತನ್ನ ಮಾತು ಕೇಳುತ್ತಿಲ್ಲ, ಆಸ್ತಿಗಾಗಿ ಪೋಷಕರ ಬಳಿ ಕೇಳುತ್ತಿಲ್ಲ ಎಂಬ ಕಾರಣಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಮೃತಳ ತಂದೆ ಬಸವರಾಜ್ ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿ, “ನನ್ನ ಮಗಳು ಅನುಭವಿಸುತ್ತಿದ್ದ ಹಿಂಸೆಯನ್ನು ನಮ್ಮ ಬಳಿ ಹೇಳದೆ ಮೌನವಾಗಿ ಸಹಿಸಿಕೊಂಡಿದ್ದಳು. ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂದು ಹೇಳಿದ್ದೇ ಅವರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಕಣ್ಣೀರಿಟ್ಟಿದ್ದಾರೆ.
ಮಗುವಿನೊಂದಿಗೆ ತಾಯಿ ಬಲಿಯಾಗಿರುವ ಈ ಹತ್ಯೆ ಮಾನವೀಯತೆ ಇಲ್ಲದ ಕೃತ್ಯವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



