ಚಿಕ್ಕಮಗಳೂರು:- ಜಿಲ್ಲೆ ಶೃಂಗೇರಿ ತಾಲೂಕಿನ ಬೇಗಾರು ಸಮೀಪದ ಬೋಳೂರು ಕ್ರಾಸ್ ಬಳಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಫ್ಲೆಕ್ಸ್ನ್ನು ಕಿಡಿಗೇಡಿಗಳು ಬ್ಲೇಡ್ನಿಂದ ಹರಿದು ಹಾಕಿರುವ ಘಟನೆ ನಡೆದಿದೆ.
ಈ ಘಟನೆಯನ್ನು ಖಂಡಿಸಿ ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರೀಗೆಬೈಲು ಗ್ರಾಮದಲ್ಲಿ ಜನವರಿ 31ರಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ಜನವರಿ 28ರ ರಾತ್ರಿ ಯುವಕರು ಕಾರ್ಯಕ್ರಮದ ಫ್ಲೆಕ್ಸ್ನ್ನು ಅಳವಡಿಸಿದ್ದರು. ಮಧ್ಯರಾತ್ರಿ 12:30ರವರೆಗೆ ಯುವಕರು ಸ್ಥಳದಲ್ಲೇ ಇದ್ದು ಬಳಿಕ ತೆರಳಿದ್ದರು. ಆದರೆ ಇಂದು ಮುಂಜಾನೆ ಕಿಡಿಗೇಡಿಗಳು ಫ್ಲೆಕ್ಸ್ನ್ನು ಹರಿದು ಹಾಕಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷ ಪ್ರದೀಪ್ ಚೋಳರಮನೆ ಅವರು ಶೃಂಗೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಫ್ಲೆಕ್ಸ್ ಹರಿದು ಹಾಕಿದ ಕೃತ್ಯದಿಂದ ಸ್ಥಳೀಯವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.



