ಚಿಕ್ಕಮಗಳೂರು:- ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಕೇವಲ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬೀದಿ ನಾಯಿಗಳ ದಾಳಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಜನರು ರಸ್ತೆಗಿಳಿಯಲು ಸಹ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಜನವರಿ 1ರಿಂದ 29ರವರೆಗೆ ಒಟ್ಟು 1011 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಈ ದಾಳಿಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ನಾಯಿ ದಾಳಿಗೆ ಒಳಗಾದ ಗಾಯಾಳುಗಳು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಗರ ಪ್ರದೇಶದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿದ್ದು, ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಸಮಸ್ಯೆ ತೀವ್ರವಾಗಿದೆ. ತಾಲೂಕುವಾರು ಪರಿಶೀಲಿಸಿದರೆ ಚಿಕ್ಕಮಗಳೂರು, ಕಡೂರು ಸೇರಿ ಏಳು ತಾಲೂಕುಗಳಲ್ಲಿ ನಾಯಿ ದಾಳಿಗಳ ಸಂಖ್ಯೆ ಹೆಚ್ಚು ದಾಖಲಾಗಿರುವುದು ಕಂಡುಬಂದಿದೆ.
ತಾಲೂಕುವಾರು ನಾಯಿ ಕಡಿತ ಪ್ರಕರಣಗಳ ವಿವರ:
ಚಿಕ್ಕಮಗಳೂರು: 112
ಕಡೂರು: 183
ತರೀಕೆರೆ: 179
ಮೂಡಿಗೆರೆ: 194
ಕೊಪ್ಪ: 218
ಎನ್.ಆರ್.ಪುರ: 48
ಶೃಂಗೇರಿ: 78
ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಮತ್ತು ನಗರಸಭೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ವಿಶೇಷವಾಗಿ ಶಾಲೆಗೆ ತೆರಳುವ ಮಕ್ಕಳು ಹಾಗೂ ಬೆಳಗಿನ ಜಾವ ಕೆಲಸಕ್ಕೆ ಹೋಗುವ ಕಾರ್ಮಿಕರು ಮತ್ತು ನಾಗರಿಕರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ ಸಂತಾನ ನಿಯಂತ್ರಣ, ಲಸಿಕೆ ಕಾರ್ಯಕ್ರಮ ಮತ್ತು ಪುನರ್ವಸತಿ ಕಾರ್ಯಗಳನ್ನು ತ್ವರಿತವಾಗಿ ಜಾರಿಗೆ ತರಬೇಕು ಎಂದು ಸಾರ್ವಜನಿಕರು ಆಡಳಿತವನ್ನು ಒತ್ತಾಯಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯೂ ವ್ಯಕ್ತವಾಗಿದೆ.



