ಬೆಂಗಳೂರು: ಸಿಟಿ ಪೊಲೀಸರ ಇಮೇಜ್‌ಗೆ ಧಕ್ಕೆ ತರುವಂತಹ ಘಟನೆಯಲ್ಲಿ, ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚೀಟಿ ವ್ಯವಹಾರ ಸಂಬಂಧಿತ ಪ್ರಕರಣವೊಂದರಲ್ಲಿ ದೂರುದಾರರಿಗೆ ಅನುಕೂಲ ಮಾಡಿಕೊಡುವುದಾಗಿ ಹಾಗೂ ‘ಬಡ್ಸ್ ಆಕ್ಟ್’ (BUDS Act) ಅಡಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಇನ್ಸ್‌ಪೆಕ್ಟರ್ ಮೇಲಿತ್ತು. ಒಟ್ಟು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅವರು ಈಗಾಗಲೇ 1 ಲಕ್ಷ ರೂ. ಪಡೆದು, ಬಾಕಿ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ ಬಳಿ ದೂರುದಾರರನ್ನು ಕರೆಸಿದ್ದರು.
ಹಣ ಪಡೆಯುತ್ತಿದ್ದ ಕ್ಷಣದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇನ್ಸ್‌ಪೆಕ್ಟರ್‌ರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾದಾಗ ಇನ್ಸ್‌ಪೆಕ್ಟರ್ ಗೋವಿಂದರಾಜು ತೀವ್ರ ಪ್ರತಿರೋಧ ತೋರಿದ್ದಾರೆ. ಆರಕ್ಕೂ ಹೆಚ್ಚು ಅಧಿಕಾರಿಗಳು ಹಿಡಿದಿದ್ದರೂ ಕಿರುಚಾಟ ಹಾಗೂ ರೋಷಾವೇಶ ಪ್ರದರ್ಶಿಸಿದ್ದು ಸಾರ್ವಜನಿಕರ ಗಮನ ಸೆಳೆದಿದೆ.
ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.



