ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಅನಧಿಕೃತವಾಗಿ ಭೇಟಿ ಮಾಡಿದ ಪ್ರಕರಣದಲ್ಲಿ ಜೈಲು ಹಾಗೂ ಪೊಲೀಸ್ ಇಲಾಖೆಯಲ್ಲಿ ಕಠಿಣ ಕ್ರಮ ಜರುಗಿಸಲಾಗಿದೆ. ಯಲಹಂಕ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ಗೆ ದರ್ಶನ್ ಭೇಟಿಗೆ ಅವಕಾಶ ಮಾಡಿಕೊಟ್ಟ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕ್ರಮ ಕೈಗೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಕರ್ತವ್ಯಲೋಪ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಪ್ರಭುಶಂಕರ ಚೌಹಾಣ್ ಅವರನ್ನು ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಈ ಘಟನೆಯ ಕುರಿತು ಇಲಾಖಾ ತನಿಖೆಗೂ ಆದೇಶಿಸಲಾಗಿದೆ.
ಜನವರಿ 24ರಂದು ಯಲಹಂಕ ಠಾಣೆಯ ಕಾನ್ಸ್‌ಟೇಬಲ್ ಗಣೇಶ್ ಆರೋಪಿಗಳನ್ನು ಜೈಲಿಗೆ ಬಿಡಲು ಬಂದ ವೇಳೆ, ನಟ ದರ್ಶನ್ ಅವರನ್ನು ನೋಡಲು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ವಾರ್ಡನ್, ಸಿಸಿಟಿವಿ ಕ್ಯಾಮರಾ ತಪ್ಪಿಸಿ ಕಾನ್ಸ್‌ಟೇಬಲ್ ಅವರನ್ನು ದರ್ಶನ್ ಇರುವ ಬ್ಯಾರಕ್ ಸಮೀಪಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಡಿಜಿಪಿ ಅಲೋಕ್ ಕುಮಾರ್ ಅವರ ಗಮನಕ್ಕೆ ಬಂದ ಕೂಡಲೇ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ನಿಯಮ ಉಲ್ಲಂಘಿಸಿ ಜೈಲಿನೊಳಗೆ ಪ್ರವೇಶಿಸಿ ದರ್ಶನ್ ನೋಡಲು ಹೋಗಿದ್ದ ಪೊಲೀಸ್ ಪೇದೆ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಸೂಚನೆ ನೀಡಲಾಗಿದೆ.
ಈ ಕ್ರಮದ ಮೂಲಕ ಜೈಲಿನೊಳಗಿನ ಭದ್ರತೆ ಹಾಗೂ ನಿಯಮ ಪಾಲನೆಗೆ ಯಾವುದೇ ವಿನಾಯಿತಿ ಇಲ್ಲ ಎಂಬ ಸಂದೇಶವನ್ನು ಜೈಲು ಆಡಳಿತ ರವಾನಿಸಿದೆ.



