ಯಲಬುರ್ಗಾ: ತಾಲ್ಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ ಪರಿಣಾಮ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಶಾಲೆ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿಗಳು ಸುಸ್ತಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಲಕರು ವಿಚಾರಿಸಿದಾಗ, ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ ಅಸ್ವಸ್ಥತೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಈ ವಿಷಯವನ್ನು ಮನೆಯಲ್ಲಿ ಹೇಳದಂತೆ ಶಿಕ್ಷಕರು ಗದರಿಸಿದ್ದಾರೆ ಎಂಬ ಆರೋಪವನ್ನೂ ವಿದ್ಯಾರ್ಥಿಗಳು ಪಾಲಕರ ಮುಂದೆ ಮಾಡಿಕೊಂಡಿದ್ದಾರೆ. ಘಟನೆ ತಿಳಿದ ಬಳಿಕ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಿದೆ. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡ 25 ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಬಿಆರ್‌ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಅಸ್ವಸ್ಥತೆಗೆ ಕಾರಣವಾಗಿರುವುದಾಗಿ ಶಂಕಿಸಿರುವ ಬಿಸಿಯೂಟ ಹಾಗೂ ಅಡುಗೆ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಮತ್ತು ಪಾಲಕರು ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ 10 ಗಂಟೆಯಾದರೂ ಶಾಲೆಯ ಮುಖ್ಯಶಿಕ್ಷಕರು ಗ್ರಾಮಕ್ಕೆ ಆಗಮಿಸದೇ, ದೂರವಾಣಿ ಕರೆಗಳನ್ನು ಸ್ವೀಕರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಯಲಬುರ್ಗಾ ಬಿಇಒ ಅಶೋಕ ಗೌಡರ್, “ಚಿಕ್ಕಬನ್ನಿಗೋಳ ಶಾಲೆಯ ಕೆಲವು ಮಕ್ಕಳು ಅಸ್ವಸ್ಥಗೊಂಡಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಅಪಾಯ ಇಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.



