ಬೆಂಗಳೂರು: ರಾಜ್ಯ ಸರ್ಕಾರವು ಗ್ಯಾರಂಟಿ ಎಂದು ಹೇಳುತ್ತ ಹೇಳುತ್ತ ಗ್ಯಾರಂಟಿಯಲ್ಲಿ ಜನರಿಗೆ ಬಹುದೊಡ್ಡ ಮೋಸವನ್ನು ಮಾಡುತ್ತಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಆರೋಪಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಜನವರಿ 2025ರ ಹಣವನ್ನಾದರೂ ಹಾಕಿ ಅಥವಾ ಅಕ್ಕಿಯನ್ನಾದರೂ ಕೊಡಿ ಎಂದು ಆಗ್ರಹಿಸಿದರು. ಒಂದು ಕಡೆ ಗೃಹಲಕ್ಷ್ಮಿಯ 2025ರ ಫೆಬ್ರವರಿ, ಮಾರ್ಚ್ ತಿಂಗಳ 5 ಸಾವಿರ ಕೋಟಿ ಹಣವನ್ನು ಕೊಟ್ಟಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರವು ಜನವರಿ 2025ಕ್ಕೆ ಸಂಬಂಧಿಸಿ ಪಡಿತರ ಚೀಟಿದಾರರಿಗೆ 657 ಕೋಟಿ ಹಣವನ್ನಾದರೂ ಹಾಕಲಿ ಅಥವಾ 5 ಕೆಜಿ ಅಕ್ಕಿಯನ್ನಾದರೂ ಮಾರ್ಚ್ ತಿಂಗಳ ಒಳಗೆ ಕೊಡಬೇಕು ಎಂದು ಒತ್ತಾಯಿಸಿದರು. ಇದು ಭಿಕ್ಷೆ ಹಾಕುವುದಲ್ಲ; ಗ್ಯಾರಂಟಿ ಘೋಷಿಸುವಾಗ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಆದರೆ, 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. 5 ಕೆಜಿ ಅಕ್ಕಿಯನ್ನು ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೊಡುತ್ತಿದೆ ಎಂದು ಗಮನ ಸೆಳೆದರು.
ಆದರೆ, ಜನವರಿ 2025ಕ್ಕೆ ಸಂಬಂಧಿಸಿ ಪಡಿತರ ಚೀಟಿದಾರರಿಗೆ ಅಕ್ಕಿ ಕೊಟ್ಟಿಲ್ಲ; 657 ಕೋಟಿ ಉಳಿತಾಯವೇ? ಹಣಕಾಸಿನ ತೊಂದರೆ ಇದೆಯೇ? ಎಂದು ಕೇಳಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ಸಚಿವರು ಮಾಡಬೇಕೆಂದು ಆಗ್ರಹಿಸಿದರು. 1 ಕೋಟಿ 27 ಲಕ್ಷ ಜನರಿಗೆ ಅಕ್ಕಿ ಹಾಕುವುದಾಗಲೀ ಅಥವಾ ಹಣ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವರು ಸದನದಲ್ಲಿ ಉತ್ತರ ಕೊಡುವ ವೇಳೆ ಇದನ್ನು ಕೇಂದ್ರ ಸರಕಾರದ ಮೇಲೆ ಹಾಕುವ ಪ್ರಯತ್ನ ಮಾಡಿದ್ದರು. ಇದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಮಾಹಿತಿ ಪಡೆದಿದ್ದೇನೆ. ದುಡ್ಡು ತುಂಬಿದರೆ ಮಧ್ಯಾಹ್ನದ ಒಳಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದಾರೆ; ಇದರಲ್ಲಿ ಕೇಂದ್ರ ಸರಕಾರದ ಯಾವುದೇ ರೀತಿಯ ಪಾಲಿಲ್ಲ ಎಂದರಲ್ಲದೇ, ರಾಜ್ಯ ಸರಕಾರವೇ ಮೋಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.



