ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಗೆ ಗೈರಾಗಿದ್ದ ವಿಚಾರಕ್ಕೆ ಸಂಬಂಧಿಸಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪಂಕಜ್ ಕುಮಾರ್ ಪಾಂಡೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಪಾಂಡೆ ಅವರನ್ನು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ BWSSB ಚೇರ್ಮನ್ ಡಾ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಕೆಪಿಟಿಸಿಎಲ್ ಎಂಡಿಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದಿದ್ದ ಮಹತ್ವದ ಸಭೆಗೆ ಪಂಕಜ್ ಕುಮಾರ್ ಪಾಂಡೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ನೋಟಿಸ್ ಕೂಡ ನೀಡಲಾಗಿತ್ತು. ಸಭೆಗೆ ಗೈರಾಗಿದ್ದ ಕಾರಣ ಶಿಸ್ತು ಕ್ರಮ ಕೈಗೊಳ್ಳುವ ಚಿಂತನೆಯಲ್ಲೂ ಸರ್ಕಾರ ಇತ್ತು.
ಆದರೆ ಸಚಿವ ಕೆ.ಜೆ. ಜಾರ್ಜ್ ಹಿರಿಯ ಐಎಎಸ್ ಅಧಿಕಾರಿ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪಾಂಡೆ ವಿರುದ್ಧ ಕ್ರಮ ಕೈಗೊಂಡರೆ ತಾವು ರಾಜೀನಾಮೆ ನೀಡುವುದಾಗಿ ಜಾರ್ಜ್ ಹೇಳಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಸ್ತು ಕ್ರಮ ಕೈಬಿಟ್ಟು, ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.



