ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆಯ ಎದುರು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಕಳೆದ 91 ದಿನಗಳಿಂದ ನಡೆಯುತ್ತಿರುವ `ಕಾರ್ಖಾನೆ ತೊಲಗಿಸಿ, ಜೀವ ಉಳಿಸಿ- ಧರಣಿಗೆ ಎನ್.ಕೆ.ಪಿ.ಎಂ ಶಾಲೆಯ ವಿದ್ಯಾರ್ಥಿಗಳು ಬೆಂಬಲಿಸಿದರು.
ಈ ವೇಳೆ ಶಿಕ್ಷಕಿ ರಂಗಮ್ಮ ಕೆ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪಿಸಿದ ಕೈಗಾರಿಕೆಗಳು ನಮ್ಮ ಜೀವಕ್ಕೆ ಬಾಧೆಯನ್ನುಂಟು ಮಾಡುತ್ತಿವೆ. ನಮಗೆ ಮೊದಲು ಜೀವ ಮತ್ತು ಆರೋಗ್ಯ ಉಳಿಯಬೇಕು. ಆನಂತರವಷ್ಟೇ ಅಭಿವೃದ್ಧಿ, ಉದ್ಯೋಗ ಕುರಿತು ಮಾತನಾಡೋಣ. ಈಗ ಕೊಪ್ಪಳಕ್ಕೆ ಸಂಕಷ್ಟ ತಂದಿರುವುದು ಪರಿಸರ ಮಾಲಿನ್ಯ. 20 ಹಳ್ಳಿಗಳು ಗಂಭೀರ ರೋಗರುಜಿನಗಳಿಂದ ಬಾಧಿತವಾಗಿವೆ. ಇದು ಗೊತ್ತಿದ್ದೂ ನಗರದ ಪಕ್ಕದಲ್ಲಿ ಬಹುದೊಡ್ಡ ಹೂಡಿಕೆ ಮಾಡಿ ಮಾಲಿನ್ಯಕಾರಕ ಬಲ್ಡೋಟ್ ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ? ಮುಂದಿನ ಮಕ್ಕಳ ಭವಿಷ್ಯವಂತೂ ಇದರಿಂದ ಕತ್ತಲಾಗುತ್ತದೆ. ಆದ್ದರಿಂದ ನಾವೆಲ್ಲ ಹೋರಾಡಿ ಎಷ್ಟೇ ಕಷ್ಟವಾದರೂ ಇದನ್ನು ನಿಲ್ಲಿಸೋಣ. ಇಲ್ಲದಿದ್ದರೆ ಊರು ಬಿಟ್ಟು ಹೋಗಬೇಕಾಗುತ್ತದೆ ಎಂದರು.
ವಿದ್ಯಾರ್ಥಿಗಳಾದ ಕೃಷ್ಣ, ಮಧು, ಜೋಯಾ ಮಾತನಾಡಿ, ನಾವೆಲ್ಲರೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬಂದಿದೆ. ಇಲ್ಲಿನ ಹಿರಿಯರು ನಮ್ಮ ಭವಿಷ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಾವು ವಿಧೇಯರಾಗಿರೋಣ ಎಂದರು.
ಪರಿಸರ ಜಾಗೃತಿ ಗೀತೆಯನ್ನು ವಿದ್ಯಾರ್ಥಿಗಳಾದ ಮಿಶ್ಬಾ, ಅರ್ಪಿತಾ, ಮಧು, ಕೃಷ್ಣ ಮತ್ತು ಶ್ವೇತಾ ಹಾಡಿದರು. ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಮಹದೇವಪ್ಪ ಮಾವಿನಮಡು, ವಿಜಯ ಮಹಾಂತೇಶ್ ಹಟ್ಟಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಡಿ.ಎಂ. ಬಡಿಗೇರ, ಚಾರಣ ಬಳಗದ ಸಿ.ಬಿ. ಪಾಟೀಲ್, ಮಂಜುನಾಥ ಕವಲೂರು, ಗವಿಸಿದ್ದಪ್ಪ ತುಮ್ಮರಗುದ್ಧಿ, ಪಂಪಣ್ಣ ಚಿಂತಪಲ್ಲಿ, ರತ್ನಮ್ಮ ಪುರಾಣಿಕಮಠ, ಪದ್ಮಾವತಿ ದಸ್ತೇನವರ್, ರಮೇಶ ಪಿ.ಬಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ಯಮನೂರಪ್ಪ ಹಳ್ಳಿಕೇರಿ, ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕ ಬಿ.ಎಂ. ನಿತಿನ್ ಮಾತನಾಡಿ, ಕೊಪ್ಪಳ ಅತ್ಯಂತ ಶುಷ್ಕ ಹವಾಮಾನ ಇರುವ ನಗರ. ಈಗ ಧೂಳುಮಯವಾಗಿದೆ. ಮಕ್ಕಳಾದಿಯಾಗಿ ಪರಿಸರದ ಹಕ್ಕು ಕೇಳುವುದು ಇಲ್ಲಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು.



