ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ನಡೆದ 2025–26ನೇ ಸಾಲಿನ ತೃತೀಯ ತ್ರೈಮಾಸಿಕ ಪ್ರಿವೆಂಟಿವ್ ಸ್ಕ್ವಾಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂರಕ್ಕಿಂತ ಹೆಚ್ಚು ಬಾರಿ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಿಗೆ ಯಾವುದೇ ರಿಯಾಯಿತಿ ಇಲ್ಲ. ಮಟ್ಕಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿದ್ದ ಅಬ್ದುಲ್ ರಶೀದ್ ತಂದೆ ಹೈದರಸಾಬ್ ಮುಜಾವರ (53)–ಮುಳಗುಂದ, ಫಕ್ಕಿರೇಶ ಯಲ್ಲಪ್ಪ ಹೊಸಕೇರಿ (42)–ಶಿರಹಟ್ಟಿ ಹಾಗೂ ಬಸವರಾಜ ತಂದೆ ಮೈಲಪ್ಪ ದೊಡ್ಡಮನಿ (21)–ಡಂಬಳ ಇವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಾಕಿ ಉಳಿದಿರುವ ಮಟ್ಕಾ ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, ಅವುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪೊಲೀಸ್ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಮಾತನಾಡಿ, ಅಕ್ಟೋಬರ್ 2025ರಿಂದ ಡಿಸೆಂಬರ್ 2025ರವರೆಗೆ ದಾಖಲಾದ ಒಟ್ಟು 44 ಮಟ್ಕಾ ಪ್ರಕರಣಗಳಲ್ಲಿ ದೋಷಾರೋಪಣ ಪತ್ರಗಳನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, 25 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಉಳಿದ 19 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ–ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಚಿನಗುಂಡಿ, ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ–2) ರಾಜಶೇಖರಯ್ಯ ಕಾಲವಾಡಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.



