ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಕಿರಾಣಿ, ಹೋಟೆಲ್, ಬೇಕರಿ ಇತರೆ ಆಹಾರ ಪದಾರ್ಥ ಮಾರಾಟದ ಅಂಗಡಿಗಳಿಗೆ ಶುಕ್ರವಾರ ತಾಲೂಕಾ ಆಹಾರ ಸುರಕ್ಷತಾ ಮತ್ತು ತಾಲೂಕಾ ವೈದ್ಯಾಧಿಕಾರಿ ಡಾ. ಸುಭಾಸ್ ದಾಯಗೊಂಡ ಭೇಟಿ ನೀಡಿ ಪರಿಶೀಲಿಸಿದರು.
ಲಕ್ಷ್ಮೇಶ್ವರ ಪಟ್ಟಣದ ಕಿರಾಣಿ ಅಂಗಡಿಗಳಲ್ಲಿ ಕಳಪೆ ಉಪ್ಪು ಮಾರಾಟವಾಗುತ್ತಿದೆ ಮತ್ತು ಹೋಟೆಲ್, ಬೇಕರಿಗಳಲ್ಲಿನ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಬಂದ ದೂರುಗಳನ್ನು ಆಧರಿಸಿ ಡಾ. ಸುಭಾಸ್ ದಾಯಗೊಂಡ ಸಿಬ್ಬಂದಿಗಳೊಡಗೂಡಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ ಪರಿಶೀಲಿಸಿ ನಿಯಮ ಪಾಲಿಸದ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಕೆಲವರಿಗೆ ನೋಟೀಸ್ ಕೊಟ್ಟರು.
ಈ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ ಎಗ್‌ರೈಸ್ ಅಂಗಡಿಗಳ ಸಂಖ್ಯೆ ಹೆಚ್ಚಿವೆ. ಇಲ್ಲಿ ಯಥೇಚ್ಚವಾಗಿ ಅಜಿನೋಮೋಟೋ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಸಲಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ಉಪ್ಪಿನ ಪ್ಯಾಕೆಟ್ ಮತ್ತು ಧಾನ್ಯಗಳು ಸಹಿತ ಆಹಾರ ಪದಾರ್ಥಗಳ ಮಾರಾಟವಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗುತ್ತಿದೆ. ಉಪ್ಪು ಸೇರಿ ಸಂಶಯಾಸ್ಪದ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದುಕೊಂಡಿದ್ದು, ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭೇಟಿಯ ವೇಳೆ ಅನೇಕರು ಲೈಸನ್ಸ್, ಲೇಬಲ್ ಇಲ್ಲದೇ ವ್ಯಾಪಾರ ಮಾಡುತ್ತಿರುವುದು, ಸ್ವಚ್ಛತೆ ಕಾಪಾಡದಿರುವುದು ಕಂಡುಬಂದಿದೆ. ಎಲ್ಲ ಬಗೆಯ ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಧಿಡೀರ್ ದಾಳಿ ಮಾಡಿ ದಂಡ ವಿಧಿಸಲಾಗುವುದು ಮತ್ತು ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಹೇಳಿದರು.
ಈ ವೇಳೆ ವೈದ್ಯರಾದ ಪ್ರವೀಣ ಫಾಯದೆ, ದತ್ತುಕುಮಾರ, ಗಣೇಶ, ರವಿ ಕೊಪ್ಪದ ಇದ್ದರು.



