ರಾಯಚೂರು: ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯ ನೀರು ಕುಡಿಯಲು ಹೋದ ವೇಳೆ ಕರೆಂಟ್ ಶಾಕ್ ತಗುಲಿ 11 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹರಿಜನ ವಾಡದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ತನುಶ್ರೀ (11) ಎಂದು ಗುರುತಿಸಲಾಗಿದೆ. ತನುಶ್ರೀ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಮಧ್ಯಾಹ್ನ ಊಟದ ವೇಳೆ ನೀರು ಕುಡಿಯಲು ತೆರಳಿದಾಗ, ಶಾಲೆಯ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಹಾಕಲಾಗಿದ್ದ ವಿದ್ಯುತ್ ವೈಯರ್ ತಗುಲಿ ಕರೆಂಟ್ ಶಾಕ್ ಹೊಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಘಟನೆಯ ಬಳಿಕ ಶಾಲೆ ಆಡಳಿತ ಮಂಡಳಿ, ಮುಖ್ಯಶಿಕ್ಷಕ (ಎಚ್‌ಎಂ) ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ವಿರುದ್ಧ ಪಾಲಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿನ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಈ ಘಟನೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



