ನವದೆಹಲಿ: ಸುಮಾರು ₹40,000 ಕೋಟಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಪ್ರಕರಣದ ಆರ್ಥಿಕ ಅಂಶಗಳು ಮತ್ತು ಹಣ ವರ್ಗಾವಣೆಯ ಜಾಡು ಪತ್ತೆಹಚ್ಚುವ ಉದ್ದೇಶದಿಂದ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 21 ರಂದು ಸಿಬಿಐ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಅದೇ ಪ್ರಕರಣದ ಆಧಾರದಲ್ಲಿ ಇಡಿ ಹಣದ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ.
ಪುನೀತ್ ಗಾರ್ಗ್ ಅವರು 2006ರಿಂದ 2013ರವರೆಗೆ ಆರ್‌ಸಿಒಎಂ ಅಧ್ಯಕ್ಷರಾಗಿ ಕಂಪನಿಯ ಜಾಗತಿಕ ಉದ್ಯಮ ವ್ಯವಹಾರಗಳನ್ನು ನಿರ್ವಹಿಸಿದ್ದರು. ಬಳಿಕ 2014 ರಿಂದ 2017ರವರೆಗೆ ಅಧ್ಯಕ್ಷರಾಗಿ (ನಿಯಂತ್ರಣ ವ್ಯವಹಾರಗಳು) ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್ 2017ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ಅವರು, 2019ರಿಂದ 2025ರವರೆಗೆ ಆರ್‌ಸಿಒಎಂನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಬಂಧನದ ಬಳಿಕ ಪುನೀತ್ ಗಾರ್ಗ್ ಅವರನ್ನು ಶುಕ್ರವಾರ ರೌಸ್ ಅವೆನ್ಯೂ ಕೋರ್ಟ್‌ನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಪರಾಧದ ಉಳಿದ ಹಣವನ್ನು ಪತ್ತೆಹಚ್ಚಲು, ಇತರ ಆರೋಪಿಗಳನ್ನು ಗುರುತಿಸಲು ಮತ್ತು ಸಂಪೂರ್ಣ ಹಣ ವರ್ಗಾವಣೆ ಸರಪಳಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ನ್ಯಾಯಾಲಯವು ಅವರನ್ನು ಒಂಬತ್ತು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.



