ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ನಿವೇಶನ ಮಾರಾಟದ ಕುರಿತು ದೂರು ಬಂದ ಹಿನ್ನೆಲೆ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ನ್ಯಾಯಾಲಯವನ್ನು ಸಂಪರ್ಕಿಸಲಾಗಿದೆ.
ಕೋರ್ಟ್‌ನಿಂದ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿದ್ದು, ಅದರ ಮೂಲಕ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಮತ್ತು ನಳಿನಿ ಎಂಬವರಿಗೆ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 30ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ಹೊಸದುರ್ಗ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.
ಮುರುಘಾಶ್ರೀ ವಿರುದ್ಧ ಈಗಾಗಲೇ ಫೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಅವರ ಮೇಲೆ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಆ ನಿರ್ಬಂಧವನ್ನು ಉಲ್ಲಂಘಿಸಿ ನಿವೇಶನ ಮಾರಾಟ ಮಾಡಲಾಗಿದೆ ಎಂಬುದು ಆಡಳಿತ ಸಮಿತಿಯ ಆರೋಪವಾಗಿದೆ.



