ಮೋದಿ, ಅಮಿತ್ ಶಾ ರೈತರ ಪಾದಮುಟ್ಟಿ ಕ್ಷಮೆಯಾಚಿಸಬೇಕು; ಪಾಟೀಲ್

Vijayasakshi (Gadag News) :

‘ಕೇಂದ್ರ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು

ವಿಜಯಸಾಕ್ಷಿ ಸುದ್ದಿ, ಗದಗ:

ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ರೈತಾಪಿ ಸಮುದಾಯಕ್ಕೆ ಸಮಾಧಾನ ಮೂಡಿಸಿದೆ. ನನಗಂತೂ ಸಂತೋಷ ತಂದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿರುವ ಅವರು, ‘ಕೇಂದ್ರ ಸರ್ಕಾರದ ನೀತಿ ಕೆಟ್ಟ ಮೇಲೆ ಮತಿ ಬಂತು ಎಂಬ ಹಾಗಾಗಿದೆ. ಕೇಂದ್ರ ಸರ್ಕಾರ ಕೆಟ್ಟ ಕಾನೂನುಗಳನ್ನು ಮಾಡುವ ಮೂಲಕ ಸಿರಿವಂತರಿಗೆ ಸಹಾಯ ಮಾಡುವ ದುರಾಲೋಚನೆ ಇಟ್ಟುಕೊಂಡಿದ್ದರು. ರೈತರನ್ನು ಬಗ್ಗು ಬಡಿಯಬೇಕೆಂಬ ಆಲೋಚನೆಗೆ ಪೂರ್ಣ ವಿರಾಮ ಸಿಕ್ಕಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಮಾಡಿದಂತಹ ತಪ್ಪಿನಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ಹೋರಾಟ, ಸತ್ಯಾಗ್ರಹ ನಡೆದಾಗ ರೈತರ ಮೇಲೆ ಜೀಪ್ ಹಾಯಿಸಿ ಕೊಲ್ಲುವ ಮಟ್ಟಕ್ಕೆ ಹೋದ ರಾಜಕೀಯ ನಾಯಕರು, ಬಿಜೆಪಿ ಕಾರ್ಯಕರ್ತರು ಉತ್ತರಿಸಬೇಕು. ಅಡುಗೆ ಆದ ಮೇಲೆ ಒಲೆ ಹತ್ತಿದ ಹಾಗೆ, ಪರವಾಗಿಲ್ಲ ಇಷ್ಟೆಲ್ಲಾ ಗಲಾಟೆಗಳಾದ ಮೇಲಾದರೂ ವಾಪಸ್ ಪಡೆದರಲ್ಲ. ಪಶ್ಚಾತ್ತಾಪದ ಮೊದಲ ಹೆಜ್ಜೆ ಇದಾಗಿದೆ ಎಂದರು.

ಕೇಂದ್ರ ಸರ್ಕಾರ, ಹೋರಾಟದಲ್ಲಿ ಮರಣ ಹೊಂದಿದ ರೈತರಿಗೆ ಪರಿಹಾರ ಕೊಡಬೇಕು. ಪ್ರತಿಭಟನೆ ಮಾಡುತ್ತಿರುವ ರೈತರನ್ನು ನಕಲಿ ರೈತರು, ದೇಶದ್ರೋಹಿಗಳು, ಭಯೋತ್ಪಾದಕರು ಎಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ರೈತರ ಪಾದಮುಟ್ಟಿ ಕ್ಷಮೆಯಾಚಿಸಬೇಕು ಎಂದಿರುವ ಅವರು, ಇದು ಕಾಂಗ್ರೆಸ್ ಪಕ್ಷದ ನಾಯಕರ ದಿಟ್ಟ ನಿಲುವಿಗೆ ಸಿಕ್ಕ ಜಯ ಇದಾಗಿದೆ ಎಂದು ಎಚ್.ಕೆ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿKannada News Kannada News Today
Leave A Reply

Your email address will not be published.

3 + 18 =