ಬೆಂಗಳೂರು: ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ದೇಶವ್ಯಾಪಿ ನಡೆಯುತ್ತಿದೆ. ಕಳೆದ ಒಂದು ದಶಕದಿಂದ ಇಡಿ, ಐಟಿ ಹಾಗೂ ಜಿಎಸ್ಟಿ ಮೂಲಕ ಉದ್ಯಮಿಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿಲುವಿಗೆ ತಲೆಬಾಗದ ಉದ್ಯಮಿಗಳೇ ಈ ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.
ಈ ಕುರಿತು ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಅಂಬಾನಿ ಹಾಗೂ ಅದಾನಿ ಮುಂತಾದ ಉದ್ಯಮಿಗಳಿಗೆ ಇಡಿ ಅಥವಾ ಐಟಿ ಯಾವುದೇ ತೊಂದರೆ ನೀಡಿಲ್ಲ. ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ, ಅವರ ಮೇಲೆ ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ಇದೇ ರೀತಿಯ ಕಿರುಕುಳ ಸಾಮಾನ್ಯ ಜನರಿಗೂ ಎದುರಾಗುತ್ತಿದೆ. ಬೇಕಾದರೆ ಸರ್ವೆ ನಡೆಸಿದರೂ ಈ ಸತ್ಯ ಬಹಿರಂಗವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜನರಿಗೆ ತೊಂದರೆ ನೀಡಲು ಹೊಸ ಆಯುಧಗಳನ್ನು ಬಳಸುತ್ತಿದೆ. ಈ ಕಿರುಕುಳದ ಬಗ್ಗೆ ನಾನು ಮಾತ್ರವಲ್ಲ, ರಾಯ್ ಅವರ ಕುಟುಂಬವೂ ಮಾತನಾಡುತ್ತಿದೆ. ಹೀಗಾಗಿ ಈ ವಿಚಾರದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.



