ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಎಸ್ಐಟಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಸೇರಿರುತ್ತಾರೆ. ಇದುವರೆಗೂ ಪ್ರಕರಣದ ತನಿಖೆಯನ್ನು ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸುತ್ತಿದ್ದರು. ಈಗಿನಿಂದ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಎಸ್ಐಟಿ ಕೈಗೆತ್ತಿಕೊಳ್ಳಲಿದೆ.
ಅಶೋಕನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್, ಸಾಕ್ಷ್ಯಗಳು ಹಾಗೂ ಇತರ ದಾಖಲೆಗಳನ್ನು ಎಸ್ಐಟಿಗೆ ಹಸ್ತಾಂತರಿಸಲಿದ್ದಾರೆ. ಎಸ್ಐಟಿ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಯ ವೇಳೆ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಪರಿಸ್ಥಿತಿ ಏನು, ಐಟಿ ಇಲಾಖೆಯ ದಾಳಿಯಿಂದ ಯಾವುದೇ ಒತ್ತಡ ಉಂಟಾಗಿತ್ತೇ, ಹಣಕಾಸಿನ ಸಮಸ್ಯೆ ಅಥವಾ ಬೇರೆ ಯಾರಾದರೂ ಒತ್ತಡ ಹೇರಿದರೇ ಎಂಬುದರ ಬಗ್ಗೆ ವಿವಿಧ ಆಂಗಲ್ಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಕರಣದ ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.



