ನವದೆಹಲಿ: ಕೃಷಿ ಕ್ಷೇತ್ರವನ್ನು ಸುಲಭ, ಸಂಘಟಿತ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೊಸ AI ಆಧಾರಿತ ಸಾಧನ ‘ಭಾರತ್ ವಿಸ್ತಾರ್’ ಅನ್ನು ಘೋಷಿಸಿದ್ದಾರೆ.
‘ಭಾರತ್ ವಿಸ್ತಾರ್’ವು ಕೃಷಿ ಸಂಪನ್ಮೂಲಗಳಿಗೆ ಪ್ರವೇಶ ಕಲ್ಪಿಸುವ ವಾಸ್ತವಿಕ ಸಂಯೋಜಿತ ವ್ಯವಸ್ಥೆಯಾಗಿದ್ದು, ಕೃಷಿ-ಸ್ಟಾಕ್ ಪೋರ್ಟಲ್ಗಳು ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಕೃಷಿ ಪದ್ಧತಿಗಳ ಪ್ಯಾಕೇಜ್ಗಳನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬಹುಭಾಷಾ AI ವೇದಿಕೆ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಾಧನದ ಮೂಲಕ ಕೃಷಿ ಉತ್ಪನ್ನಗಳ ವೈವಿಧ್ಯೀಕರಣ, ಉತ್ಪಾದಕತೆ ಹೆಚ್ಚಳ, ರೈತರ ಆದಾಯ ವೃದ್ಧಿ ಹಾಗೂ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯವಾಗಲಿದೆ ಎಂದು ವಿತ್ತ ಸಚಿವೆ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ, ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಹಾಗೂ ಗೋಡಂಬಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬೆಂಬಲ ನೀಡಲಾಗುವುದು. ಈಶಾನ್ಯ ಪ್ರದೇಶಗಳಲ್ಲಿ ಅಗರ್ ಮರಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಬಾದಾಮಿ, ವಾಲ್ನಟ್ ಮತ್ತು ಪೈನ್ ಬೀಜಗಳಂತಹ ಬೆಳೆಗಳ ಅಭಿವೃದ್ಧಿಗೂ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಿದರು.
ಭಾರತವು ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರವಾಗಿದ್ದು, ಸುಮಾರು 1 ಕೋಟಿ ರೈತರು ಸೇರಿದಂತೆ 3 ಕೋಟಿ ಜನರು ತೆಂಗಿನಕಾಯಿ ಆಧಾರಿತ ಜೀವನೋಪಾಯವನ್ನು ಹೊಂದಿದ್ದಾರೆ. ತೆಂಗಿನಕಾಯಿ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು, ಪ್ರಮುಖ ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಉತ್ಪಾದಕವಲ್ಲದ ಮರಗಳನ್ನು ಹೊಸ ಸಸಿಗಳು ಅಥವಾ ಸುಧಾರಿತ ಜಾತಿಗಳೊಂದಿಗೆ ಬದಲಾಯಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.



