ಎಂಎಲ್‌ಸಿ ಟಿಕೆಟ್‌ಗಾಗಿ ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ; ಅಧಿಕಾರ ಅನುಭವಿಸಿದ ಸಲೀಂಗೆ ಬೇಡ, ಇಸ್ಮಾಯಿಲ್‌ಗೆ ಕೊಡಿ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಧಾರವಾಡ ಎಂಎಲ್‌ಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈಗಾಗಲೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ ಶೆಟ್ಟರ್ ಅವರ ಹೆಸರು ಅಂತಿಮಗೊಂಡಿದ್ದು, ಬಿಜೆಪಿ ಜನ ಸ್ವರಾಜ್ ಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿದೆ.

ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡವುದು ಪಕ್ಕಾ ಆಗಿದೆ. ಅದರಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸಿದೆಯಾದರೂ ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ನಾಯಕ ಇಸ್ಮಾಯಿಲ್ ತಮಟಗಾರ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೇ, ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರೂ ಇಸ್ಮಾಯಿಲ್ ತಮಟಗಾರ ಅವರಿಗೆ ಎಂಎಲ್‌ಸಿ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟು 16 ಜನ ಅಲ್ಪಸಂಖ್ಯಾತರು ಧಾರವಾಡ ಎಂಎಲ್‌ಸಿ ಟಿಕೆಟ್ ಕೇಳಿದ್ದು, ಈಗಾಗಲೇ 25 ಎಂಎಲ್‌ಸಿ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.

ಡಿಕೆಶಿ ಅವರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಸ್ಮಾಯಿಲ್ ತಮಟಗಾರ ಜೊತೆಗೆ ಸಲೀಂ ಅಹ್ಮದ್ ಅವರ ಹೆಸರೂ ಇದೆ. ಆದರೆ, ಹೈಕಮಾಂಡ್ ಮಾತ್ರ ಸಲೀಂ ಅಹ್ಮದ್‌ಗೆ ಮಣೆ ಹಾಕಿದ್ದು, ಅವರ ಹೆಸರನ್ನೇ ಅಂತಿಮ ಮಾಡಿಕೊಳ್ಳುವಂತೆ ಡಿಕೆಶಿಗೆ ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಸಲೀಂ ಅಹ್ಮದ್ ಹೈಕಮಾಂಡ್ ಜೊತೆ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಅಲ್ಲದೇ, ಸೋನಿಯಾ ಗಾಂಧಿ ಅವರ ಕುಟುಂಬ ಸದಸ್ಯರಂತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎನ್ನಲಾಗಿದೆ.

ಸಲೀಂ ಅಹ್ಮದ್ ಈ ಹಿಂದೆ ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿ, ಇರದಿರಲಿ ಸಲೀಂ ಅಹ್ಮದ್‌ಗೆ ಹುದ್ದೆ ಕೊಡುತ್ತಾರೆ. ಹೀಗಾಗಿ ಹೊಸಬರಿಗೆ ಅವಕಾಶ ಕೊಡಬೇಕು. ಅದರಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವುದಾದರೆ, ಹುಬ್ಬಳ್ಳಿ-ಧಾರವಾಡ ಅಲ್ಪಸಂಖ್ಯಾತ ನಾಯಕರಾದ ಇಸ್ಮಾಯಿಲ್ ತಮಟಗಾರ, ಎ.ಎಂ.ಹಿಂಡಸಗೇರಿ, ಶಾಕೀರ್ ಸನದಿ ಅವರಿಗೆ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆನಂದಸ್ವಾಮಿ ಗಡ್ಡದ್ದೇವರಮಠ ಅಸಮಾಧಾನ

ಧಾರವಾಡ ವಿಧಾನ ಪರಿಷತ್ ಟಿಕೆಟ್‌ಗಾಗಿ ಕಾಂಗ್ರೆಸ್‌ನ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದ್ದೇವರಮಠ ಲಾಭಿ ನಡೆಸಿದ್ದರು. ಆದರೆ, ಹೈಕಮಾಂಡ್ ಟಿಕೆಟ್ ನೀಡದ್ದಕ್ಕೆ ಸದ್ಯ ಅಸಮಾಧಾನಗೊಂಡಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಹೊಸಬರಿಗೆ ಮಣೆ ಹಾಕಲಿದ್ದು, ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಆನಂದಸ್ವಾಮಿ ಗಡ್ಡದ್ದೇವರಮಠ ಅವರಿಗೆ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಅವರಿಗೆ ಎಂಎಲ್‌ಸಿ ಟಿಕೆಟ್ ಕೈತಪ್ಪಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಟ್ನಲ್ಲಿ ಸದಾ ಹೈ ಪೈ ರಾಜಕಾರಣಿಯಾಗಿರುವ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಸಿಕ್ಕಲ್ಲಿ ಆಯಾಸ ಪಡದೇ ಎಮ್ ಎಲ್ ಸಿ ಆಗೋದು ಪಕ್ಕಾ ಎನ್ನಲಾಗುತ್ತದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿKannada News Kannada News Today
Leave A Reply

Your email address will not be published.

6 + 11 =