ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-2021
10 ಮತಗಟ್ಟೆ; 5,999 ಸದಸ್ಯರಿಗೆ ಮತದಾನದ ಹಕ್ಕು
ವಿಜಯಸಾಕ್ಷಿ ಸುದ್ದಿ, ಗದಗ:
ಮೈಸೂರು ಮಹಾರಾಜರು ಸ್ಥಾಪಿಸಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಕಸಾಪದ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಭಾನುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಶತಮಾನ ಕಂಡ ಸಂಸ್ಥೆಗೆ ಗೆಲುವು ಸಾಧಿಸುವ ಮೂಲಕ ಹೊಸ ಭರವಸೆ ಮೂಡಿಸುವ ತವಕದಲ್ಲಿದ್ದಾರೆ.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗೆಲುವಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ರಾಜಕೀಯ ಪಕ್ಷಗಳು, ನಾಯಕರು ನಾಚುವಂತಹ ರೀತಿಯಲ್ಲಿ ಪ್ರಚಾರ ನಡೆಸಿರುವ ಕಸಾಪ ಅಭ್ಯರ್ಥಿಗಳು ಸದ್ಯ ಕೊನೆಯ ಕ್ಷಣದ ಕಸರತ್ತು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಒಟ್ಟು 5,999 ಆಜೀವ ಸದಸ್ಯರಿದ್ದು, ಶೇ. 70 ಪಾಲು ಸರ್ಕಾರಿ ನೌಕರರೇ ಇದ್ದಾರೆ. ಗದಗ- 1,901, ಶಿರಹಟ್ಟಿ- 298, ಲಕ್ಷ್ಮೇಶ್ವರ- 613, ನರೇಗಲ್- 196, ಹೊಳೆಆಲೂರ- 300, ರೋಣ- 453, ನರಗುಂದ- 662, ಮುಂಡರಗಿ- 782 ಹಾಗೂ ಗಜೇಂದ್ರಗಡ 794 ಮತದಾರರಿದ್ದಾರೆ. 10 ಮತಗಟ್ಟೆಗಳನ್ನು ತೆರೆಯಲಾಗಿದೆ.

ತಮ್ಮನಗೌಡರ, ಕಮ್ಮಾರ ಏಕಾಂಗಿ ಹೋರಾಟ:
ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಡಾ| ಶರಣು ಗೋಗೇರಿ ಹಾಗೂ ವಿವೇಕಾನಂದಗೌಡ ಪಾಟೀಲ್ ಬಿರುಸಿನ ಪ್ರಚಾರ ನಡೆಸಿದ್ದು, ಇಬ್ಬರ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಕಳೆದ ಬಾರಿ ಪರಾಜಿತಗೊಂಡ ಸಂಗಮೇಶ ತಮ್ಮನಗೌಡರ ಹಾಗೂ ಐ.ಕೆ. ಕಮ್ಮಾರ ಏಕಾಂಗಿ ಹೋರಾಟ ನಡೆಸಿದ್ದಾರೆ. ಅಬ್ಬರವಿಲ್ಲದೆ ಜಿಲ್ಲಾದ್ಯಂತ ಓಡಾಡಿ, ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಮತ ನೀಡುವಂತೆ ಮನವಿ ಮಾಡಿದ್ದಾರೆ. ಮತದಾರರ ಒಲವು ಯಾರಿಗೆ ಎಂಬುದು ಫಲಿತಾಂಶದಿಂದಲೇ ತಿಳಿಯಬೇಕಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಲ್ಲಿ ನನ್ನ ಬಗ್ಗೆ ಒಳ್ಳೆಯ ವಾತಾವರಣವಿದ್ದು, ಬದಲಾವಣೆ ಆಗಬೇಕೆಂದು ಬಯಸಿದ್ದಾರೆ. ಐದು ವರ್ಷಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ಆಗಿಲ್ಲ. ಸಾಹಿತ್ಯಿಕ ಚಟುವಟಿಕೆಗಳೂ ನಡೆಯದೆ ಕಸಾಪದಿಂದ ಸಾಹಿತಿಗಳು ದೂರ ಸರಿದಿದ್ದಾರೆ. ಬದಲಾವಣೆ ಆಗಬೇಕೆಂಬುವುದು ಎಲ್ಲರ ಅಭಿಪ್ರಾಯ ಆಗಿದ್ದು, ಗೆಲ್ಲುತ್ತೇನೆಂಬ ನಂಬಿಕೆ ಇದೆ.
ವಿವೇಕಾನಂದಗೌಡ ಪಾಟೀಲ್, ಅಭ್ಯರ್ಥಿ
ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ರಾಜಕಾರಣ, ಗುಂಪುಗಾರಿಕೆ ಮಾಡದೆ ಒಂದು ಸಿದ್ಧಾಂತದ ಮೇಲೆ ಸರಳ ರೂಪದಲ್ಲಿ ಚುನಾವಣೆ ಮಾಡುತ್ತಿದ್ದೇನೆ. ಸೋಲು ಗೆಲುವು ಮುಖ್ಯವಲ್ಲ. ಆದರೆ, ಚುನಾವಣೆ ಹೀಗೆ ಇರಬೇಕೆಂದು ರಾಜ್ಯಕ್ಕೆ ತೋರಿಸುತ್ತಿದ್ದೇನೆ. ಜಿಲ್ಲೆಯಾದ್ಯಂತ ಸಾಕಷ್ಟು ಅಡ್ಡಾಡಿ ಪ್ರಚಾರ ಮಾಡಿದ್ದೇನೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದೆ. ಈ ಬಾರಿ ಗೆಲ್ಲುವ ಆಶಾವಾದವಿದೆ.
ಸಂಗಮೇಶ ತಮ್ಮನಗೌಡರ, ಅಭ್ಯರ್ಥಿ
ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಗೆಲ್ಲುವುದು ಬಹುತೇಕ ಖಚಿತ. ರಾಜ್ಯದಲ್ಲಿಯೇ ಹೆಚ್ಚು ಮತಗಳನ್ನು ಪಡೆಯುವ ಮೂಲಕ ದಾಖಲೆಯ ಅಂತರದಲ್ಲಿ ಗೆಲ್ಲಬೇಕೆಂದು ಪ್ರಯತ್ನಿಸುತ್ತಿದ್ದೇನೆ.
ಡಾ| ಶರಣು ಗೋಗೇರಿ, ಕಸಾಪ ನಿಕಟಪೂರ್ವ ಅಧ್ಯಕ್ಷ
ನನ್ನ ಮತ್ತು ನನ್ನ ಸಾಹಿತ್ಯಿಕ ಸಾಧನೆಯನ್ನು ಗದುಗಿನ ಜನ ಬಹಳ ಹತ್ತಿರದಿಂದ ನೋಡಿದ್ದಾರೆ. ಸರ್ಕಾರಿ ನೌಕರರಿಗೆ ವಿದ್ಯಾರ್ಥಿಗಳ ಸೇವೆ ಮಾಡುವುದೇ ಕಷ್ಟ, ಇನ್ನು ಕಸಾಪಕ್ಕೆ ಪೂರ್ಣಾವಧಿಯ ಸೇವೆ ಒದಗಿಸಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳ ಅವಧಿ ಆಜೀವ ಸದಸ್ಯರಿಗೆ ತೃಪ್ತಿದಾಯಕ ಆಗಿರದ ಕಾರಣ ಜನರು ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ. ಜಯ ನನ್ನದೇ.
–ಐ.ಕೆ. ಕಮ್ಮಾರ, ಅಭ್ಯರ್ಥಿ
ಕಳೆದ ಬಾರಿಯ ಫಲಿತಾಂಶ
ಕಳೆದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಆರು ಜನ ಅಭ್ಯರ್ಥಿಗಳ ಪೈಕಿ ಡಾ| ಶರಣು ಗೋಗೇರಿ ಹಾಗೂ ಸಂಗಮೇಶ ತಮ್ಮನಗೌಡರ ಪುನಃ ಅಖಾಡಕ್ಕಿಳಿದ್ದಾರೆ. ಕಳೆದ ಬಾರಿ ಒಟ್ಟು 2,500 ಮತಗಳು ಚಲಾವಣೆಯಾಗಿದ್ದವು. ಡಾ| ಶರಣು ಗೋಗೇರಿ 1,250 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಡಾ| ಶಿವಪ್ಪ ಕುರಿ 650 ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ಸಂಗಮೇಶ ತಮ್ಮನಗೌಡರ 238 ಮತ ಗಳಿಸಲಷ್ಟೇ ಶಕ್ತರಾಗಿದ್ದರು. ಎಸ್.ಬಿ.ಕುಷ್ಠಗಿ 377 ಮತ ಪಡೆದಿದ್ದರೆ, ಮಂಜುನಾಥ ಡೋಣಿ ಹಾಗೂ ಮಹಿಳಾ ಅಭ್ಯರ್ಥಿ ಪಾಟೀಲ್ ಸೋಲಿನ ಕಹಿಯುಂಡಿದ್ದರು.