ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧದ ಗಟ್ಟಿಯಾದ ಧ್ವನಿಯಾಗಿ ಮೂಡಿಬಂದಿದೆ. ಜನವರಿ 23ರಂದು ಬಿಡುಗಡೆಯಾದ ಈ ಚಿತ್ರಕ್ಕೆ ವಿಮರ್ಶಕರಿಂದ ಮಾತ್ರವಲ್ಲದೆ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಯಶಸ್ಸಿನ ನಡುವೆ ಇದೀಗ ಚಿತ್ರಕ್ಕೆ ಸರ್ಕಾರದ ಮಟ್ಟದಲ್ಲೂ ಬೆಂಬಲ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿರುವುದು ಚಿತ್ರತಂಡಕ್ಕೆ ದೊಡ್ಡ ಉತ್ತೇಜನ ನೀಡಿದೆ. ಇದರಿಂದ ಟಿಕೆಟ್ ದರ ಕಡಿಮೆಯಾಗಲಿದ್ದು, ಹೆಚ್ಚಿನ ಜನರು ಚಿತ್ರ ವೀಕ್ಷಿಸಲು ಅವಕಾಶ ಸಿಗಲಿದೆ.
70ರ ದಶಕದ ಹಿನ್ನೆಲೆಯ ಕಥೆಯನ್ನೊಳಗೊಂಡ ‘ಲ್ಯಾಂಡ್ಲಾರ್ಡ್’ನಲ್ಲಿ ದುನಿಯಾ ವಿಜಯ್ ರಾಚಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಂಗವ್ವ ಮತ್ತು ಮಗಳು ಭಾಗ್ಯಾಳ ಜೊತೆ ಸರಳ ಜೀವನ ನಡೆಸುವ ರಾಚಯ್ಯ, ಜಮೀನ್ದಾರಿ ವ್ಯವಸ್ಥೆಯ ಶೋಷಣೆಯನ್ನು ಎದುರಿಸಬೇಕಾಗುತ್ತದೆ. ಸಣ್ಣ ಧಣಿ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಕ್ರೂರತೆ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದೆ.
ಅಸಮಾನತೆಯನ್ನು ಪ್ರಶ್ನಿಸಿದ ಯುವಕನ ಹತ್ಯೆ, ಅದರಿಂದ ಸಿಡಿದೇಳುವ ರಾಚಯ್ಯನ ಹೋರಾಟ ಸಿನಿಮಾ ತುಂಬಾ ತೀವ್ರತೆಯನ್ನು ತರುತ್ತದೆ. ರಚಿತಾ ರಾಮ್ ಮತ್ತು ರಿತನ್ಯಾ ರಾಮ್ ಪಾತ್ರಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ. ವಿಶೇಷವಾಗಿ ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ರಾಮ್ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದು ಗಮನ ಸೆಳೆದಿದೆ.
ಬುಕ್ ಮೈ ಶೋನಲ್ಲಿ ಸುಮಾರು 3,000ಕ್ಕೂ ಹೆಚ್ಚು ಜನರು ರೇಟಿಂಗ್ ನೀಡಿದ್ದು, 9.4/10 ಅಂಕಗಳನ್ನು ಸಿನಿಮಾ ಪಡೆದುಕೊಂಡಿದೆ. ಇದು ಚಿತ್ರದ ಜನಪ್ರಿಯತೆಯ ಸ್ಪಷ್ಟ ಸೂಚನೆ. ವಿಮರ್ಶಕರ ಮೆಚ್ಚುಗೆ, ಪ್ರೇಕ್ಷಕರ ಬೆಂಬಲ ಮತ್ತು ಸರ್ಕಾರದ ತೆರಿಗೆ ವಿನಾಯಿತಿ – ಈ ಮೂರು ಅಂಶಗಳು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಭಾರಿ ಬಲ ನೀಡಿವೆ.



