ಮಣಿಪುರ:- ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿದೆ.
2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ನಡೆದ ರಾಜಕೀಯ ಪ್ರಕ್ರಿಯೆಯ ನಂತರ, ಕೇಂದ್ರದಿಂದ ರಾಷ್ರಪತಿ ಆಳ್ವಿಕೆ ಹೇರಲಾಗಿತ್ತು. ಬಿಜೆಪಿ ಶಾಸಕರ ಗುಂಪು ದೆಹಲಿಗೆ ತೆರಳಿ ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಭೆ ನಡೆಸಿ, ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಸಮಾಲೋಚನೆ ನಡೆಸಿತು.
ನಂತರ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಪಕ್ಷದ ರಾಜ್ಯ ಶಾಸಕರ ನಾಯಕರಾಗಿ ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2017 ಮತ್ತು 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಎರಡು ಅವಧಿಗಳಿಗಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. 2017ರಲ್ಲಿ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು ಮತ್ತು ಪೂರ್ಣ 5 ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. . ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುವವರೆಗೆ ಅವರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.



