ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕ್ರಿಕೆಟ್ ಅಭ್ಯಾಸದ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.
ಕ್ರಿಕೆಟ್ ಚೆಂಡು ಬಲವಾಗಿ ಮುಖಕ್ಕೆ ಬಡಿದ ಪರಿಣಾಮ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳಭಾಗದಲ್ಲಿ ತೀವ್ರ ಗಾಯವಾಗಿದೆ. ಗಾಯದ ತೀವ್ರತೆಯಿಂದಾಗಿ ಅವರ ಮುಖವೂ ವಿರೂಪಗೊಂಡಿರುವುದು ಕಂಡುಬಂದಿದೆ. ಈ ವಿಚಾರವನ್ನು ಸ್ವತಃ ಬೆನ್ ಸ್ಟೋಕ್ಸ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಗಾಯದ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, “ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನೂ ಪರಿಶೀಲಿಸಬೇಕು” ಎಂದು ಬರೆದು, ಅಭ್ಯಾಸದ ವೇಳೆ ಚೆಂಡು ಮುಖಕ್ಕೆ ಬಡಿದಿದ್ದನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ.
ಸ್ಟೋಕ್ಸ್ ಅವರ ಕಣ್ಣಿನ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಕೆನ್ನೆ ಭಾಗದಲ್ಲಿ ಕೆಂಪು ಗಲೆ ಮೂಡಿದೆ. ಜೊತೆಗೆ ಮೂಗಿನ ಕೆಳಭಾಗದಲ್ಲಿಯೂ ಗಾಯದ ಗುರುತುಗಳಿವೆ. ಗಾಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗಾಯದ ಸ್ಥಿತಿಯನ್ನು ಗಮನಿಸಿದರೆ, ಸ್ಟೋಕ್ಸ್ ಕೂದಲೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು.
ಒಂದು ವೇಳೆ ಚೆಂಡು ಇನ್ನೂ ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ ಕಣ್ಣಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇತ್ತು. ಅಂಥ ಪರಿಸ್ಥಿತಿಯಲ್ಲಿ ಶಾಶ್ವತ ದೃಷ್ಟಿ ಹಾನಿ ಸಂಭವಿಸಿ ಅವರ ಕ್ರಿಕೆಟ್ ವೃತ್ತಿಜೀವನಕ್ಕೂ ಅಪಾಯ ಎದುರಾಗಬಹುದಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ, ಬೆನ್ ಸ್ಟೋಕ್ಸ್ ಗಂಭೀರ ಅನಾಹುತದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.



