ಲೈಂಗಿಕ ಅಪರಾಧಗಳ ಆರೋಪ ಎದುರಿಸಿದ್ದ ಜೆಫ್ರಿ ಎಪ್ಸ್ಟೀನ್ ಪ್ರಕರಣವು ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದುರುಪಯೋಗಕ್ಕೆ ತಳ್ಳಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಲಕ್ಷಾಂತರ ಪುಟಗಳ ‘ಎಪ್ಸ್ಟೀನ್ ಫೈಲ್ಸ್’ ದಾಖಲೆಗಳು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಜಾಲವನ್ನು ಬಹಿರಂಗಪಡಿಸಿವೆ.
ಈ ದಾಖಲೆಗಳಲ್ಲಿ ಇ-ಮೇಲ್ ಸಂವಹನಗಳು, ವಿಡಿಯೋಗಳು, ಫೋಟೋಗಳು ಮತ್ತು ಸಭೆಗಳ ವಿವರಗಳು ಸೇರಿವೆ. ಜಗತ್ತಿನ ಹಲವು ಶ್ರೀಮಂತರು ಮತ್ತು ಸೆಲೆಬ್ರಿಟಿಗಳ ಹೆಸರುಗಳು ಇದರಲ್ಲಿ ಕಾಣಿಸಿಕೊಂಡಿದ್ದು, ಬಿಲ್ ಗೇಟ್ಸ್ ಅವರು ಈಗಾಗಲೇ ಎಪ್ಸ್ಟೀನ್ ಜೊತೆಗಿನ ಸಂಪರ್ಕದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಇದೀಗ, ಭಾರತದ ಕೆಲ ಪ್ರಸಿದ್ಧ ಸೆಲೆಬ್ರಿಟಿಗಳ ಹೆಸರುಗಳು ಈ ದಾಖಲೆಗಳಲ್ಲಿ ಉಲ್ಲೇಖವಾಗಿವೆ ಎಂಬ ವರದಿಗಳು ಹೊರಬಿದ್ದಿವೆ. ನಂದಿತಾ ದಾಸ್, ಅನುರಾಗ್ ಕಶ್ಯಪ್, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಹೆಸರುಗಳು ಪ್ರಸ್ತಾಪವಾಗಿವೆ ಎನ್ನಲಾಗುತ್ತಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.
ಆದರೆ, ಹೆಸರು ಉಲ್ಲೇಖವಾಗಿದೆ ಎಂಬುದರಿಂದಲೇ ಅಪರಾಧಕ್ಕೆ ನೇರ ಸಂಬಂಧವಿದೆ ಎಂದು ನಿರ್ಧರಿಸಲಾಗುವುದಿಲ್ಲ. ಜೆಫ್ರಿ ಎಪ್ಸ್ಟೀನ್ ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ, ಅನೇಕ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದ. ಆ ಹಿನ್ನೆಲೆಯಲ್ಲಿಯೇ ಹಲವರ ಹೆಸರುಗಳು ದಾಖಲೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್, ತಮ್ಮ ವಿರುದ್ಧ ಹರಡುತ್ತಿರುವ ಆರೋಪಗಳನ್ನು ನಿರಾಕರಿಸಿದ್ದು, ಯಾವುದೇ ಅಕ್ರಮ ಚಟುವಟಿಕೆಗೆ ತಮ್ಮ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಜ್ಞರ ಅಭಿಪ್ರಾಯದಂತೆ, ಎಪ್ಸ್ಟೀನ್ ಫೈಲ್ಸ್‌ಗಳನ್ನು ಆರೋಪದ ದೃಷ್ಟಿಯಿಂದಲ್ಲ, ದಾಖಲೆಗಳ ದೃಷ್ಟಿಯಿಂದ ನೋಡಬೇಕು. ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಸ್ಪಷ್ಟ ನಿರ್ಣಯ ನೀಡುವವರೆಗೂ, ಹೆಸರುಗಳ ಉಲ್ಲೇಖವನ್ನು ಆರೋಪ ಎಂದು ಪರಿಗಣಿಸುವುದು ಸೂಕ್ತವಲ್ಲ ಎನ್ನಲಾಗುತ್ತಿದೆ.



