ಕಠ್ಮಂಡು: ಮದುವೆಯ ಸಂಭ್ರಮ ಕ್ಷಣಾರ್ಧದಲ್ಲೇ ಮಹಾವಿಪತ್ತಾಗಿ ಮಾರ್ಪಟ್ಟ ಘಟನೆ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ನಡೆದಿದೆ. ಉತ್ತರಾಖಂಡ ಗಡಿಗೆ ಸಮೀಪದ ಈ ಪ್ರದೇಶದಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಪರ್ವತ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ದುರ್ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ, ಪಶ್ಚಿಮ ನೇಪಾಳದ ಸುದುರ್ಪಾಶ್ಚಿಮ್ ಪ್ರದೇಶದ ಪುರ್ಚೌರಿ ಪುರಸಭೆಯ ಬದ್ಗಾಂವ್ ಬಳಿ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಮದುವೆ ದಿಬ್ಬಣದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ 8 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಬೈತಾಡಿ ಮತ್ತು ದಾದೇಲ್ಧುರಾ ಜಿಲ್ಲೆಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಜನರು, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು. ದುರ್ಗಮ ಪರ್ವತ ಪ್ರದೇಶ ಮತ್ತು ಆಳವಾದ ಕಂದಕ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದ್ದರೂ, ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಸಲಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಭಾರ ಹೊತ್ತಿದ್ದ ಬಸ್ ಏರುಗಾಡು ರಸ್ತೆಯಲ್ಲಿ ಸಾಗುವ ವೇಳೆ ತಾಂತ್ರಿಕ ದೋಷದಿಂದ, ವಿಶೇಷವಾಗಿ ಪ್ರೆಶರ್ ಪೈಪ್ ಒಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ನೇಪಾಳ ಅಧಿಕಾರಿಗಳು ವಿವರವಾದ ತನಿಖೆ ಕೈಗೊಂಡಿದ್ದಾರೆ.



