ಬೆಂಗಳೂರು:- ಬೆಂಗಳೂರು ಮೆಟ್ರೋ ಪ್ರಯಾಣದ ದರ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ಏರಿಕೆ ಆಗಲಿದೆ.
ಈ ನಿರ್ಧಾರವು ಸಾರ್ವಜನಿಕರಲ್ಲಿ ವಿರೋಧ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಬಾಯ್ಕಾಟ್ ಕ್ಯಾಂಪೇನ್ ಆರಂಭವಾಗಿದೆ. ಅಷ್ಟೇ ಅಲ್ಲ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜಕೀಯ ಜಟಾಪಟಿ ಶುರುವಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರವೇ ಕಾರಣ ಅಂತಿದ್ರೆ, ಕಾಂಗ್ರೆಸ್ ನಾಯಕರು ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ದರ ಏರಿಕೆ ಸಮಿತಿಯನ್ನ ಬದಲಾಯಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ. ದರ ನಿಗದಿ ಸಮಿತಿ ನಿಗದಿತ ಅವಧಿಯೊಳಗೆ ಶಿಫಾರಸು ಸಲ್ಲಿಸಬೇಕು. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನ ಮೆಟ್ರೋ ಆಡಳಿತ ಶಿಫಾರಸು ಒಪ್ಪಿ ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬಿಎಂಆರ್ಸಿಎಲ್ಗೆ ಅಧಿಕಾರವಿಲ್ಲ. ಶಿಫಾರಸು ರದ್ದುಗೊಳಿಸುವ, ಉಲ್ಲಂಘಿಸುವ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಈ ದರ ನಿಗದಿ ಕಮಿಟಿಯನ್ನು ಕೇಂದ್ರ ಸರ್ಕಾರ ರಚಿಸುತ್ತದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಿರುತ್ತಾರೆ. ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತೆ. ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾನೂನು ದರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿಪಡಿಸುತ್ತದೆಯಾದರೂ, ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆಯೂ ಕಾನೂನಿನ ಗಡಿಗಳನ್ನು ಮೀರಿದೆ. ನಾವು ನಿಮ್ಮೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು. ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು. ನಾನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ.



