ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಪಂಚಾಚಾರ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾವು ಆಡುವಂತೆ ತಮ್ಮ ಪಾಲಕರೂ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡಿರುವುದನ್ನು ಕಂಡು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ಸಂತಸಪಟ್ಟರು.
ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಲಕರ ದಿನಾಚರಣೆಯನ್ನು ವೈಶಿಷ್ಟ್ಯಮಯವಾಗಿ ಆಚರಿಸಿದ ಶಾಲಾ ಬಳಗ ಮಕ್ಕಳೆದುರಿಗೆ ವೈವಿಧ್ಯಮಯ ಆಟೋಟಗಳನ್ನು ಪಾಲಕರಿಂದ ಆಡಿಸುವ ಮೂಲಕ ಚಿಣ್ಣರ ಮನ ಮುದಗೊಳ್ಳಲು ಕಾರಣರಾದರು.
ಮಹಿಳಾ ಪಾಲಕರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಸಿಗೆ ನೀರು ಹಾಕುವುದು, ಮ್ಯೂಸಿಕಲ್ ಚೇರ್, ಪುರುಷರಿಗಾಗಿ ಓಟ, ಬಾಟಲ್ ಜೋಡಣೆ, ಹಣೆಯ ಮೇಲಿನ ಬಿಸ್ಕತ್ನ್ನು ಕೈ ತಾಗಿಸದೆ ಬಾಯಿಗೆ ಬೀಳಿಸುವುದು ಸೇರಿದಂತೆ ವಿವಿಧ ಆಟಗಳನ್ನು ಆಡಿಸಲಾಯಿತು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ವಿ.ಎ. ಕುಂಬಾರ, ಪಾಲಕರು ದೈಹಿಕ, ಮಾನಸಿಕ ವೃದ್ಧಿಗಾಗಿ ಯಾವುದಾದರೊಂದು ಕಾರ್ಯಚಟುವಟಿಕೆಯಲ್ಲಿ ತೊಡಗಬೇಕು. ಈ ಮೂಲಕ ಅವರು ಸುಂದರ ಬದುಕು ಸಾಗಿಸುವಂತಾಗಬೇಕು ಎಂದರು.
ತಮ್ಮ ಮಕ್ಕಳ ಆಟ-ಪಾಠವನ್ನು ನೋಡಿ ಸಂತಸಪಡುವ ಪಾಲಕರೇ ಸ್ವತಃ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ಅದರಲ್ಲೂ ತಾಯಂದಿರು ಕ್ರೀಡೆಯಲ್ಲಿ ಪಾಲ್ಗೊಂಡಿರುವುದು ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬೆಟಗೇರಿ ಮಾತನಾಡಿ, ಪಾಲಕರಿಗಾಗಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಂದೆ-ತಾಯಿ, ಕುಟುಂಬದವರು ಭಾಗವಹಿಸುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಮತ್ತು ಪಾಲಕರು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದರು.
ದೈಹಿಕ ಶಿಕ್ಷಕ ರಫೀಕ ರೇವಡಿಗಾರ ಹಾಗೂ ವಿ.ಬಿ. ಬಿಂಗಿ ಪಾಲಕರಿಗೆ ವಿವಿಧ ಕ್ರೀಡೆಗಳನ್ನು ಆಡಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.



