ನೆಲಮಂಗಲ: ಕೆನಡಾದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನ್ನಡಿಗ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ನೆಲಮಂಗಲ ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ (37) ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿ ಹತ್ತಾರು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.
ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್, ಎಲ್ಎನ್ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದ ಚಂದನ್, ಸ್ನೇಹವಂತ ಮತ್ತು ಶಾಂತ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.
ಘಟನೆ ಕುರಿತು ನಿನ್ನೆ ಟೊರೊಂಟೋ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಹತ್ಯೆಯ ಹಿನ್ನೆಲೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾವುದೇ ವೈಷಮ್ಯ, ಬೆದರಿಕೆ ಅಥವಾ ಅಪರಾಧ ಹಿನ್ನೆಲೆ ಬಗ್ಗೆ ಕುಟುಂಬಕ್ಕೆ ಮಾಹಿತಿ ಇಲ್ಲ.
ಮೃತನ ತಂದೆ ನಂದ ಕುಮಾರ್ ಅವರ ನೋವಿನ ಮಾತುಗಳು ಹೃದಯವನ್ನೇ ಹಿಂಡುತ್ತವೆ.
“ಮಗನಿಗೆ ಹುಡುಗಿಯನ್ನು ನೋಡುತ್ತಿದ್ದೆವು. ಭಾರತಕ್ಕೆ ಬರ್ತೀನಿ ಅಂತ ಹೇಳಿದ್ದ. ಈಗ ಈ ದುಃಖ… ಮಗನ ಶವವನ್ನಾದರೂ ನಮ್ಮ ಮನೆಗೆ ತಂದು ಕೊಡಿ” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕುಟುಂಬಸ್ಥರು ಯಾವುದೇ ಮಾಹಿತಿ ಇಲ್ಲದೆ ಪರದಾಡುತ್ತಿದ್ದು, ಕೆನಡಾದಿಂದ ಮೃತದೇಹವನ್ನು ಭಾರತಕ್ಕೆ ತರಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಗೊಂದಲದಲ್ಲಿದ್ದಾರೆ. ವಿದೇಶದಲ್ಲಿ ಕನ್ನಡಿಗರ ಸುರಕ್ಷತೆ ಪ್ರಶ್ನೆಯಾಗಿ ಮತ್ತೆ ಎದ್ದಿರುವ ಈ ಪ್ರಕರಣದ ಬಗ್ಗೆ ಕೆನಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



