ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹19 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹೊಂದಿದ್ದ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾರಸುದಾರರಿಗೆ ಸುರಕ್ಷಿತವಾಗಿ ವಾಪಸ್ ನೀಡಿದ್ದಾರೆ. RPF ಸಿಬ್ಬಂದಿಯ ತ್ವರಿತ, ಪ್ರಾಮಾಣಿಕ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಫೆಬ್ರವರಿ 08ರಂದು ರಾತ್ರಿ 08.35ರ ಸುಮಾರಿಗೆ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣವೇ ಅವರು ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ, ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ವಾರಸುದಾರರಿಲ್ಲದೆ ಇದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ RPF ಪೋಸ್ಟ್‌ಗೆ ಕೊಂಡೊಯ್ಯಲಾಯಿತು.
ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 100 ಗ್ರಾಂ ಚಿನ್ನಾಭರಣಗಳು (ಸುಮಾರು ₹17 ಲಕ್ಷ ಮೌಲ್ಯ) ಹಾಗೂ ₹2 ಲಕ್ಷ ನಗದು ಇರುವುದು ದೃಢಪಟ್ಟಿದೆ. ಬಳಿಕ ರೈಲ್ ಮದದ್ ದೂರು, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರನ್ನು ಸಂಪರ್ಕಿಸಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಟ್ರಾಲಿ ಬ್ಯಾಗ್ ಅನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ಕಳೆದುಕೊಂಡ ಅಮೂಲ್ಯ ವಸ್ತು ಮರಳಿ ಸಿಕ್ಕ ಬೆನ್ನಲ್ಲೇ ಪ್ರಯಾಣಿಕ ನಿಟ್ಟುಸಿರು ಬಿಟ್ಟಿದ್ದು, RPF ಸಿಬ್ಬಂದಿಯ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.



