ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರಿನ ಮಹಿಳೆಯರಿಗೆ ವಿಶೇಷ ಮತ್ತು ಅರ್ಥಪೂರ್ಣ ಉಡುಗೊರೆ ಸಿಕ್ಕಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ವಿನೂತನವಾದ ‘ಸಖಿ ಆಟೋ’ ಸೇವೆ ಇದೇ ಫೆಬ್ರವರಿ 14, 2026ರಿಂದ ನಗರದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.
‘ಸಖಿ ಆಟೋ’ ಸಂಪೂರ್ಣವಾಗಿ ಮಹಿಳಾ ಪ್ರಯಾಣಿಕರಿಗಾಗಿ ರೂಪುಗೊಂಡಿರುವ ಸಾರಿಗೆ ವ್ಯವಸ್ಥೆಯಾಗಿದ್ದು, ಮಹಿಳಾ ಚಾಲಕಿಯರೇ ಮಹಿಳಾ ಪ್ರಯಾಣಿಕರನ್ನು ಸಾಗಿಸುವುದು ಈ ಸೇವೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಆರಂಭದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸೇವೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿದಂತೆ 24 ಗಂಟೆಗಳ ಸೇವೆ ನೀಡುವ ಯೋಜನೆಯಿದೆ.
ಇತರ ಆಪ್ ಆಧಾರಿತ ಸೇವೆಗಳಂತೆ ಮಳೆ ಅಥವಾ ಟ್ರಾಫಿಕ್ ಹೆಸರಿನಲ್ಲಿ ದರ ಏರಿಕೆ ಇರುವುದಿಲ್ಲ. ಮೊದಲ 2 ಕಿಲೋಮೀಟರ್ಗಳಿಗೆ 50 ರೂ ಹಾಗೂ ನಂತರ ಪ್ರತಿ ಕಿಲೋಮೀಟರ್ಗೆ 20 ರೂ ನಿಗದಿಪಡಿಸಲಾಗಿದೆ.
ಪ್ರಸ್ತುತ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದ್ದು, ಅಲ್ಲಿಯವರೆಗೆ ride.sakhiwomen.in ವೆಬ್ಸೈಟ್ ಅಥವಾ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.
ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನೂ ಚಾಲಕಿಯರಾಗಿ ನೇಮಿಸಿಕೊಳ್ಳುವ ಗುರಿ ಈ ಸಂಸ್ಥೆ ಹೊಂದಿದ್ದು, ಮಹಿಳಾ ಉದ್ಯೋಗ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಇದು ದೊಡ್ಡ ಹೆಜ್ಜೆಯಾಗಿದೆ.



