ಚಿಕ್ಕಬಳ್ಳಾಪುರ:- ಖದೀಮನೋರ್ವ ಎಣ್ಣೆ ನಶೆಯಲ್ಲಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ್ದ ವೇಳೆ ನಿದ್ದೆ ಬಂದ ಕಾರಣ ಅಲ್ಲೇ ಬೆಚ್ಚಗೆ ಮಲಗಿ ತಗಲಾಕಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಜರುಗಿದೆ.
ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ಕೂಡ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು ದೋಚಿ ಓರ್ವ ಕಳ್ಳ ಪರಾರಿಯಾಗಿದ್ದರೆ, ಮತ್ತೊಬ್ಬ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ. ಇತ್ತ ಮನೆಗೆ ಕಳ್ಳರು ನುಗ್ಗಿರುವ ಅನುಮಾನದಿಂದ ಮಾಲೀಕ ಪ್ರೇಮನಾಥನಿಗೆ ಕರೆ ಮಾಡಿ ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು, ರಾತ್ರೋ ರಾತ್ರಿ ಮನೆಗೆ ಹಿಂದಿರುಗಿದ್ದಾರೆ.
ಇನ್ನು ಮನೆಗೆ ಪ್ರೇಮನಾಥ ಎಂಟ್ರಿಯಾಗ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಕಳ್ಳತನಕ್ಕೆಂದು ಬಂದಾತ ಮನೆಯಲ್ಲೇ ಮಲಗಿದ್ದನ್ನು ನೋಡಿದ ಅವರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಗೌರಿಬಿದನೂರಿನ ನದಿದಡ ವಾರ್ಡ್ನ ದೇವರಾಜು ಎಂಬುದು ಗೊತ್ತಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.



