ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ಕುತ್ತಿಗೆಯಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸುತ್ತಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಾವಿರ ದಿನದಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯರಿಂದ ಮುಡಾ ಹಗರಣ ನಡೆದಿದೆ. ಮುಡಾ ಹಗರಣದ ಮೂಲ ಪುರುಷ ಸಿದ್ದರಾಮಯ್ಯ ಆಗಿದ್ದು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣ ನುಂಗಿದ್ದಾರೆ. ಈ ವೇಳೆ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಸಲ್ಲಿಸಿ, ಜೈಲಿಗೆ ಹೋಗಿದ್ದರು. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದು, ಇನ್ಸ್ಪೆಕ್ಟರ್ ಸೇರಿ ವಿವಿಧ ಹುದ್ದೆಗಳಿಗೆ ಹಣ ಫಿಕ್ಸ್ ಮಾಡಿ, ಈ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಗೃಹಲಕ್ಷ್ಮೀ ಹಣ ಕೊಡುವುದಾಗಿ ಹಣ ಲೂಟಿ ಹೊಡೆಯುತ್ತಿರುವ ಸರ್ಕಾರವು ಒಂದು ತಿಂಗಳ ಹಣ ನೀಡದೆ, ಅನ್ನಭಾಗ್ಯ ಹಣದಲ್ಲೂ ಲೂಟಿ ಹೊಡೆಯುತ್ತಿದೆ. ರೈತರ ರಸಗೊಬ್ಬರ ಸಹ ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆ, ಹೆಣ್ಣು ಮಕ್ಕಳ ಸಾವು ನಡೀತಿದೆ. ರಾಜ್ಯದಲ್ಲಿ ಬ್ಯಾಂಕ್ಗಳ ಲೂಟಿ ನಡೆಯುತ್ತಿದೆ. ಪೊಲೀಸರೇ ಕಳ್ಳರಾದರೆ ರಾಜ್ಯದಲ್ಲಿ ಯಾವ ಸ್ಥಿತಿಯಿದೆ. ಅಧಿಕಾರಿಗಳು ಕೆಲಸ ಮಾಡುವ ಮೂಡ್ನಲ್ಲಿಲ್ಲ. ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಕೆಲವರು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗ್ತಿದ್ದು, ಸರ್ಕಾರದ ಕಿರುಕುಳದಿಂದ ಸಾವುಗೀಡಾದ ಅಧಿಕಾರಿಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಗೃಹ ಸಚಿವ ಪರಮೇಶ್ವರ್ಗೆ ಕೇಳಿದ್ರೆ ಗೊತ್ತಿಲ್ಲ ಅಂತಾರೆಂದು ಕಿಡಿಕಾರಿದ್ದಾರೆ.
ಈ ಕಾಂಗ್ರೆಸ್ ಸರ್ಕಾರಕ್ಕೆ ಮರಳು ದಂಧೆ ಎಟಿಎಂ ಆಗಿದ್ದು, ದೇವದುರ್ಗ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಗಲಾಟೆ ನಡೆಸಲಾಗಿದೆ. ಅಧಿಕಾರಿ ವರ್ಗ ಕಾಪಾಡಿ ಕಾಪಾಡಿ ಎಂಬ ಸ್ಥಿತಿಯಲ್ಲಿದೆ. ಆದ್ರೆ ಈ ಸರ್ಕಾರದಲ್ಲಿ ನಾನ್ ಸಿಎಂ, ನೀನ್ ಸಿಎಂ ಎಂದು ಇಬ್ಬರ ಜಗಳ ನಡೆದಿದೆ. ಇವ್ರೇ ಇರ್ತಾರಾ ನಾಳೆ ಹೋಗ್ತಾರಾ ಎಂಬ ಅತಂತ್ರ ಸ್ಥಿತಿಯಲ್ಲಿರುವ ಅಧಿಕಾರಿಗಳು ಲೂಟಿಗೆ ನಿಂತಿದ್ದಾರೆ. ನಾಳೆ ನಡೆಯುವ ಸಾವಿರ ದಿನದ ಕಾರ್ಯಕ್ರಮ ಸಹ ಲೂಟಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಲೂಟಿ ಮಂತ್ರಿಗಳು ಬರ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯಗೆ ಲೂಟಿ ಹಣ ನೀಡುವರು. ಇದು ಅಲಿಬಾಬಾ ಮತ್ತು ಮೂವತ್ತು ಜನ ಕಳ್ಳರ ಸರ್ಕಾರವಾಗಿದೆ. ಇವರದ್ದು ಸಾವಿರ ದಿನದ ಸಾಧನೆ ಶೂನ್ಯ, ಬರೀ ಲೂಟಿ ಲೂಟಿ ಎಂದು ಹರಿಹಾಯ್ದರು.



