ಹುಬ್ಬಳ್ಳಿ: ಜೈಲಿಗೆ ಒಳಬರುವ ಹಾಗೂ ಹೊರಹೋಗುವ ಕೈದಿಗಳ ಮೇಲೆ ಎನ್‌ಡಿಪಿಎಸ್ (NDPS) ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಜೈಲು ಒಳಗೆ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿದೆಯೇ ಎಂಬುದನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹುಬ್ಬಳ್ಳಿಯ ಉಪಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್, ಜೈಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಸಬ್ ಜೈಲು ಕಟ್ಟಡ, ತೋಟ, ಕೈದಿಗಳಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಕೈದಿಗಳ ಸೆಲ್‌ಗಳಿಗೂ ಭೇಟಿ ನೀಡಿದರು. ಸಜಾಬಂಧಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನೂ ಆಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾರಾಗೃಹದಲ್ಲಿ ಒಟ್ಟು 132 ಕೈದಿಗಳಿದ್ದಾರೆ. ಇವರಲ್ಲಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಕೈದಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು. ಕೈದಿಗಳಿಗೆ ಜೈಲಿನಲ್ಲಿಯೇ ವಿವಿಧ ಕೆಲಸಗಳಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುತ್ತಿದೆ. ಬಿಡುಗಡೆಯಾದ ನಂತರ ಅವರ ಜೀವನಕ್ಕೆ ಸಹಕಾರಿಯಾಗಲು ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಎಲ್ಲಾ ಜೈಲುಗಳ ಕೈದಿಗಳಿಗೆ ಯೋಗ ಮತ್ತು ಧ್ಯಾನವನ್ನು ಕಡ್ಡಾಯಗೊಳಿಸುವ ಯೋಜನೆ ರೂಪಿಸಲಾಗಿದೆ. ಮೊದಲ ಬಾರಿಗೆ ಜೈಲು ಪ್ರವೇಶಿಸುವ ಆರೋಪಿಗಳಿಗೆ ಎನ್‌ಡಿಪಿಎಸ್ ಪರೀಕ್ಷೆ ಕಡ್ಡಾಯವಾಗಿದ್ದು, ಒಂದು ವಾರದೊಳಗೆ ಈ ಕ್ರಮ ಜಾರಿಗೊಳ್ಳಲಿದೆ. ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಜೈಲಿನಿಂದಲೇ ಈ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಅದರ ಜೊತೆಗೆ, ಮೊದಲ ಬಾರಿ ಪ್ರಕರಣ ಎದುರಿಸುತ್ತಿರುವ ಆರೋಪಿಗಳನ್ನು ರೂಢಾಪರಾಧಿಗಳಿಂದ ಪ್ರತ್ಯೇಕವಾಗಿ ಇರಿಸುವ ಕ್ರಮವೂ ಕೈಗೊಳ್ಳಲಾಗಿದೆ ಎಂದು ಡಿಜಿಪಿ ಸ್ಪಷ್ಟಪಡಿಸಿದರು.



