ಬೆಂಗಳೂರು: ಪ್ರಿಯಕರನ ಸಾಲ ತೀರಿಸಲು ಆಂಟಿಯೇ ಕಳ್ಳಿಯಾಗಿ 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿತೆಯನ್ನು ಪ್ರಮೀಳಾ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಸುಧಾಕರ್ ಪರಾರಿಯಾಗಿದ್ದಾನೆ. ಕಳವು ಮಾಡಿದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದರೆ, ಸುಧಾಕರ್‌ಗೆ ಮದುವೆಯಾಗಿ 2 ಮಕ್ಕಳಿದ್ದಾರೆ. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ನಂತರ ಪ್ರಮೀಳಾ ಗಾರ್ಮೆಂಟ್ಸ್ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸಕ್ಕೆ ಸೇರಿದ್ದಳು.
ಸಂಕ್ರಾಂತಿ ಹಬ್ಬದ ವೇಳೆ ಸುಧಾಕರ್ 20 ಸಾವಿರ ರೂ. ಸಾಲ ತೀರಿಸಲು ಕೇಳಿದ್ದ. ಪ್ರಿಯಕರನಿಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ, ಅದನ್ನು ಬೊಮ್ಮನಹಳ್ಳಿಯ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿ ಹಣ ನೀಡಿದ್ದಳು.
ಸುಮಾರು 1 ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳವು ಆಗಿರುವುದು ಗೊತ್ತಾಗಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಆರಂಭದಲ್ಲಿ ತನಗೇನು ಗೊತ್ತಿಲ್ಲವೆಂದು ಪ್ರಮೀಳಾ ನಾಟಕವಾಡಿದ್ದಳು. ಆದರೆ ಪೊಲೀಸ್ ವಿಚಾರಣೆಯ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಳು.
ಪೊಲೀಸರು ಆರೋಪಿತೆಯಿಂದ ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಸುಧಾಕರ್ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.



