ಕಲಬುರ್ಗಿ:- ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.
ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಮೇಲೆ ವಿದ್ಯಾರ್ಥಿ ಶಹಬಾಜ್ ಎಂಬಾತನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಂದು ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್ ಮೊಬೈಲ್ ಬಳಸಿಕೊಂಡು ಕಾಪಿ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್, ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದುಕೊಂಡಿದ್ದರು.
ವಿದ್ಯಾರ್ಥಿಯನ್ನು ತಕ್ಷಣವೇ ಪರೀಕ್ಷಾ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಕ್ಷಣ ಪ್ರಾಧ್ಯಾಪಕ ಶಿವರಾಜಕುಮಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.
ಇನ್ನು ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಲ್ಲದೇ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ಕಾಲೇಜು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.



