ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ 3 ದಿನಗಳ ಕಾಲ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಹಮ್ಮಿಕೊಂಡಿರುವ `ಇನ್ಫೋಸಿಸ್ ಪ್ರತಿಷ್ಠಾನ-ಪುಲಿಗೆರೆ ಉತ್ಸವ’ ಶುಕ್ರವಾರ ವಿದ್ಯುಕ್ತವಾಗಿ ಆರಂಭಗೊಂಡಿತು.
ಮೊದಲ ದಿನ ಶುಕ್ರವಾರ ಪ್ರಾತಃಕಾಲ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಸೋಮೇಶ್ವರ ದೇವರಿಗೆ ಪುಷ್ಪಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನಾಗಲಕ್ಷ್ಮಿ ಕೆ.ರಾವ್, ಇದೊಂದು ಐತಿಹಾಸಿಕ ದೇವಸ್ಥಾನವಾಗಿದ್ದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿಯವರು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಸೋಮೇಶ್ವರನ ಸನ್ನಿಧಿಯಲ್ಲಿ ಈ ರೀತಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ವೈಶಿಷ್ಟ್ಯಪೂರ್ಣ ಉತ್ಸವವನ್ನು ಕಳೆದ 8 ವರ್ಷಗಳಿಂದ ಸಂಘಟಿಸುತ್ತಾ ಬರಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಬಸವೇಶ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಮಹಾಬಳೇಶ್ವರಪ್ಪ ಬೇವಿನಮರದ, ಪ್ರವೀಣ ಬಾಳಿಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಚನ್ನಪ್ಪ ಜಗಲಿ, ಡಾ. ಪಿ.ಡಿ. ತೋಟದ, ಈಶ್ವರ ಮೇಡ್ಲೇರಿ, ನಾಗರಾಜ ಕಳಸಾಪೂರ, ಸಿ.ಜಿ. ಹಿರೇಮಠ, ಸೋಮನಾಥ ಪೂಜಾರ, ಸಮೀರ ಪೂಜಾರ, ರಾಘವೇಂದ್ರ ಪೂಜಾರ, ಮಾಲಾದೇವಿ ದಂದರಗಿ, ಸುಮಾ ಚೋಟಗಲ್, ಪಾರ್ವತಿ ಕಳ್ಳಿಮಠ, ಪೂರ್ಣಾಜಿ ಖರಾಟೆ, ಸುರೇಶ್ ರಾಚನಾಯ್ಕರ್, ಬಸವರಾಜ ಮೆಣಸಿನಕಾಯಿ ಮುಂತಾದವರಿದ್ದರು.
ಪುಲಿಗೆರೆ ಉತ್ಸವ ಉದಯರಾಗ-1ರ ಪ್ರಥಮ ಕಾರ್ಯಕ್ರಮವನ್ನು ಲಕ್ಷ್ಮೇಶ್ವರದವರೇ ಆದ ಸಂಗೀತ ಶಿಕ್ಷಕಿ ವಿ.ಮುಕ್ತಾ ಕುಲಕರ್ಣಿಯವರ ಸಿತಾರ್ ವಾದನದ ಮೂಲಕ ಸೂರ್ಯೋದಯವನ್ನು ಸ್ವಾಗತಿಸಲಾಯಿತು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.
ಬಳಿಕ ಹುಬ್ಬಳ್ಳಿಯ ಯುವ ಕಲಾವಿದೆ ವಿ. ರಾಜೇಶ್ವರಿ ಪಾಟೀಲ ಅವರ ಹಿಂದೂಸ್ತಾನಿ ಸಂಗೀತ ಅಲೆ ಅಲೆಯಾಗಿ ತೇಲಿ ಬಂದಿತು. ಇವರಿಗೆ ಹರ್ಷಿತ ಸೋನಿ ತಬಲಾ ಹಾಗೂ ಚಿದಂಬರ ಜೋಶಿ ಹಾರ್ಮೋನಿಯಂ ಸಾಥ್ ನೀಡಿದರು.
ನಾಳೆ ಪುಲಿಗೆರೆ ಉತ್ಸವದಲ್ಲಿ
ಇನ್ಫೋಸಿಸ್ ಪುಲಿಗೆರೆ ಉತ್ಸವದಲ್ಲಿ ಫೆ.21ರಂದು 2ನೇ ದಿನದ ಉದಯರಾಗ-2ರಲ್ಲಿ ಬೆಳಿಗ್ಗೆ 6ಕ್ಕೆ ಲಕ್ಷ್ಮೇಶ್ವರದ ಯುವ ಕಲಾವಿದ ರಾಘವೇಂದ್ರ ಕೃಷ್ಣಾಜಿ ಕ್ಷತ್ರಿಯ ಇವರಿಂದ ಬಾನ್ಸುರಿ ವಾದನ, 7ಕ್ಕೆ ಬೆಂಗಳೂರಿನ ಪ್ರತಿಭಾವಂತ ಕಲಾವಿದೆ ವಿದುಷಿ ಚೈತ್ರಾ ಎಚ್.ಜಿ. ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಮಾರ್ಗದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ನೆರವೇರಲಿದೆ. ಪಲ್ಲಕ್ಕಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ.
ಸಂಜೆ 5.30ಕ್ಕೆ ಬೆಂಗಳೂರಿನ ರತ್ನಾಲಯದ ವಿ. ಅರುಣಾ ರಾಜಮಣಿ ಅವರ ತಂಡದಿಂದ ಭರತನಾಟ್ಯ, ಸಂಜೆ 6.30ಕ್ಕೆ ಬೆಂಗಳೂರಿನ ಕೂಚಿಪುಡಿ ನೃತ್ಯ ಅಕಾಡೆಮಿಯ ವಿ. ದಿವ್ಯಾ ರಾಮಚಂದ್ರ ಅವರ ತಂಡದಿಂದ ಕೂಚಿಪುಡಿ ನೃತ್ಯ ನಡೆಯಲಿದೆ. ಸಂಜೆ 7.30ಕ್ಕೆ ಕುಂದಗೋಳದ ಪಂ. ಅಶೋಕ ನಾಡಿಗೇರ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮಗಳು ನೆರವೇರಲಿವೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



