ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.
ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ಬಂಧಿಸಿ 7 ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ಇಂದು 42ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ವಿಚಾರಣೆ ವೇಳೆ ಬೈರತಿ ಬಸವರಾಜ್ ಪರ ವಕೀಲರು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸೋಮವಾರದವರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಸಿಐಡಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ಜಯದೇವ ಆಸ್ಪತ್ರೆ ವರದಿಯಲ್ಲಿ ಗಂಭೀರ ಸಮಸ್ಯೆ ಇಲ್ಲವೆಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಜೈಲಿನಲ್ಲಿಯೇ ಅಗತ್ಯ ಚಿಕಿತ್ಸೆ ನೀಡಬಹುದು ಎಂದು ಕೋರ್ಟ್‌ಗೆ ತಿಳಿಸಿದರು.
ಕೋರ್ಟ್ ಆದೇಶದಂತೆ ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಜೊತೆಗೆ ಜಯದೇವ ಆಸ್ಪತ್ರೆ ಸೂಚಿಸಿದ ಆಹಾರ ಕ್ರಮವನ್ನು ಜೈಲಿನಲ್ಲಿ ಮುಂದುವರಿಸಲು ನ್ಯಾಯಾಲಯ ಸೂಚನೆ ನೀಡಿದೆ.



