ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರ ಜಿಲ್ಲಾ ಆಸ್ಪತ್ರೆಗಳಲ್ಲಿ ನಿಯಮಗಳನ್ನು ಕಠಿಣಗೊಳಿಸಿ ಬಡವರಿಗೆ ಸೂಕ್ತ ಸಮಯದಲ್ಲಿ ಸೇವೆ ದೊರೆಯದಂತೆ ಮಾಡಿದ್ದು, ಇದು ಘೋರ ಅನ್ಯಾಯ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಮತ್ತು ಎಂಆರ್‌ಐ ಸೇವೆ ಒದಗಿಸಲಾಗುತ್ತಿದೆ. ಆದರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾಗಿ ಸೌಲಭ್ಯ ಸಿಗುತ್ತಿಲ್ಲ. ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಬಡವರು ಜಿಲ್ಲಾಸ್ಪತ್ರೆಗಳಲ್ಲಿ ಸೌಲಭ್ಯವಿಲ್ಲದ ಕಾರಣ ಬೇರೆ ನಗರಗಳಿಗೆ ಅಲೆಯುವಂತಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಪ್ರತಿನಿತ್ಯ 35ರಿಂದ 80 ಎಂಆರ್‌ಐ ಸ್ಕ್ಯಾನಿಂಗ್ ನಡೆಯುತ್ತಿದ್ದವು. ಈಗ 3ರಿಂದ 13 ಸ್ಕ್ಯಾನಿಂಗ್ ಮಾತ್ರ ಸಾಧ್ಯವಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಡಯಾಗ್ನೋಸ್ಟಿಕ್ ಸೇವೆ ಒದಗಿಸಲು ಪಿಪಿಪಿ ಮಾದರಿ ಜಾರಿಗೊಳಿಸಿ ಗುತ್ತಿಗೆ ನೀಡಲಾಗಿದೆ. ಹಿಂದೆ ತಜ್ಞ ವೈದ್ಯರು ಸೂಚಿಸಿದರೆ ಸ್ಕ್ಯಾನಿಂಗ್ ನಡೆಯುತ್ತಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿ ಎಸ್‌ಎಎಸ್‌ಟಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದ ಬಳಿಕ ಸಮಸ್ಯೆ ಸೃಷ್ಟಿಯಾಗಿದೆ. ವಿವರಗಳನ್ನು ನಿಗದಿತ ತಂತ್ರಾಂಶದಲ್ಲಿ ಟ್ರಸ್ಟ್‌ಗೆ ರವಾನಿಸಿ ಅನುಮತಿ ಪಡೆಯಲು ರೋಗಿಗಳ ರೇಷನ್ ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಮತ್ತು ಆಧಾರ್ ಕಾರ್ಡ್ ಇಲ್ಲದೆ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರು ನರಳಾಡುವ ಸ್ಥಿತಿ ಎದುರಾಗಿದೆ.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವುದು ಬಡಜನರ ಸೇವೆ ಮಾಡಲು. ಆದರೆ ಸೇವೆ ಮಾಡುವುದನ್ನು ಬಿಟ್ಟು ಲೂಟಿ ಹೊಡೆಯುತ್ತಾ ಅಡ್ಡಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಂದೆ ಬರುವ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ (ರಾಜು) ಕುರುಡಗಿ ಚಾಟಿ ಬೀಸಿದ್ದಾರೆ.



