ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆಯುತ್ತಿರುವ 9ನೇ ವರ್ಷದ ಪುಲಿಗೆರೆ ಉತ್ಸವದ ಅಂಗವಾಗಿ ಶನಿವಾರ ಪುಲಿಗೆರೆಯ ಆರಾಧ್ಯ ದೈವ ಶ್ರೀ ಸೋಮೇಶ್ವರನ ಉತ್ಸವ ಮೂರ್ತಿಯನ್ನಿರಿಸಿದ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ನೆರವೇರಿತು. ಮೆರವಣಿಗೆಯಲ್ಲಿ ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳು ಮೇಳ, ನಂದಿಕೋಲು ಕುಣಿತ, ವಾದ್ಯಮೇಳಗಳು, ಪೂರ್ಣಕುಂಭ ಮೆರವಣಿಗೆ ರಂಗು ಹೆಚ್ಚಿಸಿದ್ದವು.
ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಮಾರ್ಗದಲ್ಲಿ ಜನತೆ ತಮ್ಮ ಮನೆಯ ಮುಂಭಾಗ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಶೃಂಗರಿಸುವ ಮೂಲಕ ಶ್ರೀ ಸೋಮೇಶ್ವರನಿಗೆ ಭಕ್ತಿಯಿಂದ ನಮಿಸಿದರು. ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸೋಮೇಶ್ವರನ ಮೂರ್ತಿಯನ್ನಿರಿಸಿ ಜಾಗಟೆ ಗಂಟೆಗಳ ನಾದಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ಬಜಾರ್ ಸೇರಿ ಪ್ರಮುಖ ಪ್ರದೇಶಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ್ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಡಾ. ಪಿ.ಡಿ. ತೋಟದ, ಸುರೇಶ ರಾಚನಾಯಕ, ಎಸ್.ಪಿ. ಪಾಟೀಲ, ವಿರೂಪಾಕ್ಷಪ್ಪ ಆದಿ, ಈಶ್ವರ ಮೆಡ್ಲೇರಿ, ಡಾ. ಎಸ್.ಜಿ. ಹೂವಿನ, ಕಿರಣ ನವಲೆ, ಪ್ರಕಾಶ ಉಪನಾಳ, ಬಸವರಾಜ ಮೆಣಸಿನಕಾಯಿ, ಸಿದ್ದನಗೌಡ ಬಳ್ಳೋಳ್ಳಿ, ಮಯೂರಗೌಡ ಪಾಟೀಲ, ಐ.ಎಸ್. ಮಡಿವಾಳರ, ಶಿವಯೋಗಿ ಅಂಕಲಕೋಟಿ, ರಾಜಶೇಖರ ಶಿಗ್ಲಿಮಠ, ರುದ್ರಪ್ಪ ನರೆಗಲ್, ನಾರಾಯಣಪ್ಪ ಗಾರ್ಗಿ, ನಾರಾಯಣಸಾ ಪವಾರ, ಈರಣ್ಣ ಮುಳುಗುಂದ, ನಂದೀಶ ಬಂಡಿವಾಡ, ಜಿ.ಎಸ್. ಗುಡಗೇರಿ, ಗಂಗಾದರಯ್ಯ ಪುರಾಣಿಕಮಠ, ಸೋಮಶೇಖರ ಕೆರಿಮನಿ, ಎಸ್.ಎಫ್. ಕೊಡ್ಲಿ, ಮಾಲಾದೇವಿ ದಂದರಗಿ, ವಿದ್ಯಾ ಮಹಾಂತಶೆಟ್ಟರ, ಸುಜಾತಾ ಬಾಳಿಕಾಯಿ, ಲತಾ ತಟ್ಟಿ, ಇಂದುಮತಿ ಜಕ್ಕನಗೌಡ್ರ, ಅಶ್ವಿನಿ ಅಂಕಲಕೋಟಿ, ಶೈಲಾ ಆದಿ ಕಾವ್ಯ ದೇಸಾಯಿ ಮುಂತಾದವರಿದ್ದರು.



