ರಾಯಚೂರು :-ನಗರದಲ್ಲಿ ಬಡವರಿಗೆ ವಿತರಿಸಬೇಕಾದ ಔಷಧಿಗಳನ್ನು ರಸ್ತೆ ಬದಿ ತಿಪ್ಪೆಗೆ ಎಸೆದಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಎಲ್‌ಬಿಎಸ್ ನಗರ ಸ್ಮಶಾನ ಜಾಗದ ಸಮೀಪದ ತಿಪ್ಪೆಗುಂಡಿಯಲ್ಲಿ ಅವಧಿ ಮುಗಿಯದೇ ಇರುವ ಕೆಮ್ಮು–ಕಫ ಸೇರಿದಂತೆ ವಿವಿಧ ಕಾಯಿಲೆಗಳ ಔಷಧಿಗಳು ಹಾಗೂ ಸರ್ಕಾರದ ಮುದ್ರೆ ಇರುವ ಸಿರಂಜ್‌ಗಳು ಪತ್ತೆಯಾಗಿದ್ದು, ಜನ ಓಡಾಡುವ ಪ್ರದೇಶದಲ್ಲೇ ಇಷ್ಟು ಪ್ರಮಾಣದ ಔಷಧಿಗಳನ್ನು ಯಾರು, ಏಕೆ ಬಿಸಾಡಿದರು ಎಂಬುದು ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳು ಅವುಗಳನ್ನು ಸೇವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಡಿ.ಎಚ್.ಓ ಹಾಗೂ ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖಾಸಗಿ ಔಷಧಿಗಳ ಕುರಿತು ಡ್ರಗ್ ಕಂಟ್ರೋಲರ್ ತನಿಖೆ ನಡೆಸಲಿದ್ದಾರೆ. ಸರ್ಕಾರಿ ಮುದ್ರೆ ಇರುವ ಸಿರಂಜ್‌ಗಳ ಬಗ್ಗೆ ಈಗಾಗಲೇ ತನಿಖೆಗೆ ಸೂಚಿಸಲಾಗಿದೆ ಎಂದು ಡಿ.ಎಚ್.ಓ ಡಾ. ಸುರೇಂದ್ರಬಾಬು ಸ್ಪಷ್ಟಪಡಿಸಿದ್ದಾರೆ.



