ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಟಾಪಟಿಯ ನಡುವೆ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಿಎಂ ನಿಲುವುಗಳನ್ನು ಗೃಹಸಚಿವ G. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
“ಸಿದ್ದರಾಮಯ್ಯರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅವರ ಸಂಪೂರ್ಣ ರಾಜಕೀಯ ಜೀವನವೇ ಸಾಮಾಜಿಕ ನ್ಯಾಯದ ಸಿದ್ಧಾಂತದಡಿ ಸಾಗಿದದ್ದು. ಇದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ,” ಎಂದು ಅವರು ಸಿಎಂ ಪರವಾಗಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯರು ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಇದ್ದು, ಅಧ್ಯಕ್ಷರಾಗಿದ್ದರು. ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅವರಿಬ್ಬರ ನಡುವಿನ ವಾಕ್ಸಮರದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆ ಸಂದರ್ಭಗಳಲ್ಲಿ ಏನಾಯಿತೋ ನಮಗೆ ತಿಳಿದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇದೇ ವೇಳೆ, ಪವರ್ ಶೇರಿಂಗ್ ಗೊಂದಲದ ನಡುವೆಯೇ ‘ದಲಿತ ಸಿಎಂ’ ವಿಚಾರ ಪ್ರಸ್ತಾಪಿಸಿದ ಸಿಎಂ ಆಪ್ತ ಸಚಿವ ಮಹದೇವಪ್ಪ ವಿರುದ್ಧ ಡಿ.ಕೆ. ಸುರೇಶ್ ಸೇರಿದಂತೆ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಕ್ಷವೇ. ಯಾವಾಗ ದಲಿತ ಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ವಿಪಕ್ಷಗಳು ತಮ್ಮ ದೋಷಗಳನ್ನು ಮುಚ್ಚಿಕೊಳ್ಳಲು ದಲಿತ ಸಿಎಂ ವಿಚಾರವನ್ನು ಮುಂದಿಟ್ಟಿವೆ ಎಂದು ತಿರುಗೇಟು ನೀಡಿದರು.



