ಗದಗ: ಗದಗ–ಬೆಟಗೇರಿ ನಗರಸಭೆಯ 10ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯು ದಿನಾಂಕ 03-03-2026ರಂದು ನಡೆಯಲಿದೆ.
ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ–1964ರ ಕಲಂ 42(2)ರಂತೆ ಹಾಗೂ ಸರ್ಕಾರದ ಪ್ರಕಟಣೆ ಸಂಖ್ಯೆ ಯುಡಿಡಿ/10/ಎಮ್‌ಎಲ್‌ಆರ್/2024(1) ದಿನಾಂಕ 05-08-2024 ಮತ್ತು ಗದಗ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ಈ ಚುನಾವಣೆ ನಡೆಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ಕಾರ್ಯಾಲಯದಲ್ಲಿ ದಿನಾಂಕ 03-03-2026ರಂದು ಮಧ್ಯಾಹ್ನ 2.00 ಗಂಟೆಗೆ ಚುನಾವಣಾ ಸಭೆ ನಡೆಯಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತರಾದ ಅಭ್ಯರ್ಥಿಗಳು ಅದೇ ದಿನ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.00 ಗಂಟೆಯೊಳಗೆ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು.
ಮಧ್ಯಾಹ್ನ 2.00 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಪರಿಶೀಲನೆಯ ತಕ್ಷಣ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಮತದಾನವನ್ನು ಕೈ ಎತ್ತುವ ಮೂಲಕ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಚುನಾವಣಾ ಸಭೆ ಆರಂಭವಾಗುವ 15 ನಿಮಿಷಗಳ ಮುಂಚಿತವಾಗಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ವರ್ಗವಾರು ಮೀಸಲಾತಿ ವಿವರಗಳನ್ನು ಈ ಚುನಾವಣಾ ನೋಟೀಸ್‌ಗೆ ಲಗತ್ತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.



