ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಕಾರದಲ್ಲಿ ಭಾರತೀಯ ವಿದ್ಯಾಭವನ ಆಯೋಜಿಸಿರುವ ಪುಲಿಗೆರೆ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ನೇತೃತ್ವದ ತಂಡ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನ ಸೇರಿದ್ದ ಸಾವಿರಾರು ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ ಈ ತಂಡದ ಕಲಾವಿದೆಯರು ಸಂಪೂರ್ಣ ರಾಮಾಯಣದ ಸನ್ನಿವೇಶಗಳನ್ನೇ ಪ್ರೇಕ್ಷಕರ ಕಣ್ತುಂಬಿಸಿದರು. ರಾಮ, ಸೀತೆ, ಲಕ್ಷ್ಮಣ, ರಾವಣ, ವಿಭೀಷಣ, ಶಬರಿ, ಜಟಾಯು, ಹನುಮಂತ ಇತ್ಯಾದಿ ಪಾತ್ರಗಳನ್ನು ಸೀತಾಪಹರಣ, ಶ್ರೀರಾಮಪಟ್ಟಾಭಿಷೇಕದಂತಹ ಪ್ರಸಂಗಗಳನ್ನು ಪರಕಾಯ ಪ್ರವೇಶ ಮಾಡಿದವರಂತೆ ಲೀಲಾಜಾಲವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಆಕರ್ಷಣೆಗೆ ಕಾರಣವಾಗಿತ್ತು.
ನಂತರ ಬೆಂಗಳೂರಿನ ವಿದುಷಿ ಲತಾ ಲಕ್ಷ್ಮೀಶ್ ಮತ್ತು ತಂಡದವರು ಪ್ರಸ್ತುತಪಡಿಸಿದ ಭರತನಾಟ್ಯ ನೃತ್ಯ ವೈವಿಧ್ಯ ಗಮನ ಸೆಳೆಯುವಂತಿತ್ತು. ಈ ತಂಡದ ಕಲಾವಿದರು ಪುಷ್ಪಾಂಜಲಿ ನೃತ್ಯವನ್ನು ಪ್ರಸ್ತುತಪಡಿಸುವ ಮೂಲಕ ನೃತ್ಯ ಪ್ರದರ್ಶನವನ್ನು ಪ್ರಾರಂಭಿಸಿದರು. ಪ್ರಥಮ ಪೂಜಿತ ವಿಘ್ನನಿವಾರಕ ಗಣೇಶ ಪಂಚರತ್ನ, ಶುದ್ಧ ನೃತ್ಯ ಬಂಧವಾಗಿರುವ ಜತಿಸ್ವರದಲ್ಲಿ ಪ್ರಸ್ತುತಪಡಿಸಿದರು. ಅರ್ಧನಾರೀಶ್ವರನ ನೃತ್ಯ ವೈಭವ ಎಲ್ಲರ ಗಮನ ಸೆಳೆಯಿತು. ನಂತರದಲ್ಲಿ ಅಭಂಗಗಳು, ತರುವಾಯ ಮಹಿಷ ಮರ್ದಿನಿ ನೃತ್ಯ ರೂಪಕ ಅತ್ಯಂತ ಸುಂದರವಾಗಿ ಮೂಡಿ ಬಂದಿತು. ನಿರಂತರವಾಗಿ ನೃತ್ಯ ಪ್ರದರ್ಶಿಸಿದ ಈ ಕಲಾವಿದೆಯರು ಪ್ರೇಕ್ಷಕರ ಕರತಾಡನದಿಂದ ಪುಲಕಿತರಾದರು.
ತಂಡದ ಸದಸ್ಯರಾದ ಲಾಸ್ಯ, ಅಂಜನಾ, ಗೌತಮಿ, ತೇಜಸ್ವಿನಿ, ಪೂಜಿತಾ, ಸುಖದಾ ಭಟ್, ರಿಶಿತಾ, ತನ್ಮಯಿ, ಯಶಸ್ವಿನಿ ಅವರ ನೃತ್ಯಗಳು ಎಲ್ಲರ ಮೆಚ್ಚುಗೆ ಗಳಿಸಿದವು. ನಂತರ 3 ದಿನಗಳ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ ಪುಲಿಗೆರೆ ಉತ್ಸವದ ವೈಭವಕ್ಕೆ ಸಹಕರಿಸಿದ ಹಿರಿಯರನ್ನು ಭಾರತೀಯ ವಿದ್ಯಾಭವನದ ವತಿಯಿಂದ ಅಭಿನಂದಿಸಲಾಯಿತು.
ಅಪರೂಪದ ಕಲಾ ಪ್ರತಿಭೆಯಾಗಿರುವ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ಹಾವ-ಭಾವ, ರೌದ್ರಾವತಾರದ ಭಂಗಿ, ಯುದ್ಧದ ಸನ್ನಿವೇಶ, ಕೊನೆಗೆ ಪಟ್ಟಾಭಿಷೇಕದ ದೃಶ್ಯಗಳು ಸಂಪೂರ್ಣ ರಾಮಾಯಣದ ಚಿತ್ರಣವನ್ನು ತೆರೆದಿಟ್ಟಂತಿತ್ತು. ವಿಶೇಷವಾಗಿ ಶಬರಿಯು ರಾಮನಿಗಾಗಿ ಕಾಯುತ್ತಿರುವ ವೃದ್ಧೆಯ ಪಾತ್ರವಂತೂ ಅದ್ಭುತವಾಗಿ ಮೂಡಿಬಂದಿತು. ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದ ಈ ತಂಡ ಕೊನೆಗೆ ರಾಮನ ಪಟ್ಟಾಭಿಷೇಕ ನೆರವೇರಿಸಿದಾಗ ಇಡೀ ಆವರಣದಲ್ಲಿದ್ದ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.



