ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ವರ್ಷದ ಮಳೆಗಾಲವಿನ್ನೂ ಪ್ರಾರಂಭವಾಗಿಲ್ಲ. ಆದರೂ ಸೋಮವಾರ ಸಂಜೆ ನರೇಗಲ್ಲದಲ್ಲಿ 15-20 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿದು ರೈತರಲ್ಲಿ ಆತಂಕ ಮೂಡಿಸಿತು. ಮಳೆ ಸ್ವಲ್ಪ ಬಿರುಸಾಗಿಯೆ ಸುರಿಯಿತು. ರಸ್ತೆಯ ಮೇಲೆಲ್ಲ ನೀರು ಹರಿಯಿತು. ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳು ಮಳೆಯಿಂದ ತೊಂದರೆಗೊಳಗಾದರು.
ಚಳಿಗಾಲ ಸರಿದು ಈಗಿನ್ನೂ ಬೇಸಿಗೆ ಪ್ರಾರಂಭವಾಗುತ್ತಿದೆ. ಶಿವರಾತ್ರಿಯ ನಂತರ ಬಿಸಿಲಿಗೆ ಜನ ಶಿವಶಿವ ಎನ್ನುತ್ತಾರಂತೆ. ಆದರೆ ಶಿವರಾತ್ರಿ ಮುಗಿದು ಎಂಟು ದಿನಗಳು ಕಳೆದರೂ ಅಷ್ಟೊಂದು ಪರಿಯ ಬಿಸಿಲು ಜನರನ್ನು ಬಾಧಿಸಿಲ್ಲ. ಹೀಗಾಗಿ ಬೇಸಿಗೆ ಕಾಲದ ಪ್ರಾರಂಭವಿಲ್ಲದೆ ಸುರಿದ ಅಕಾಲಿಕ ಮಳೆ ಜನತೆಯಲ್ಲಿ ಸೋಜಿಗದ ಜೊತೆಗೆ ಆತಂಕವನ್ನುಂಟುಮಾಡಿತು.
ಜೋಳದ ಕಟಾವು ಆಗದೆ ಮಳೆಯಾದರೆ ಜೋಳದ ತೆನೆ ಕಪ್ಪಾಗುತ್ತದೆ. ಕಾಳುಗಳು ಕಪ್ಪಾಗುತ್ತವೆ. ಕುಶಿಬಿಯ ತೆನೆಯಲ್ಲಿ ನೀರು ಹೊಕ್ಕರೆ ಅದರ ಕಾಳೂ ಕಪ್ಪಾಗುತ್ತದೆ. ಹೊಲದಲ್ಲಿ ರಾಶಿ ಮಾಡಲು ಬಿಟ್ಟಿರುವ ಬೆಳೆಯೆಲ್ಲವೂ ಹಾಳಾಗುತ್ತದೆ. ನೀರಿನಿಂದ ತೊಯ್ದ ಹೊಟ್ಟನ್ನು ಒಯ್ಯಲು ಯಾರೂ ಇಚ್ಛೆ ಪಡುವುದಿಲ್ಲ. ಹೀಗೆ ರೈತರಿಗೆ ಅನೇಕ ತೊಂದರೆಗಳಾಗುತ್ತವೆ ಎಂದು ರೈತರಾದ ಬಾಳಪ್ಪ ಸೋಮಗೊಂಡ, ಕೆ.ಎಸ್. ಕಳಕಣ್ಣವರ, ಎಸ್.ಕೆ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.



