2026ರ ಟಿ–೨೦ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಐಪಿಎಲ್ ಹೊಸ ಸೀಸನ್ ಆರಂಭವಾಗಲಿದೆ. ಸದ್ಯದ ಮಾಹಿತಿಯ ಪ್ರಕಾರ ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗುವ ಸಾಧ್ಯತೆ ಇದ್ದು, ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಅದಕ್ಕೂ ಮುನ್ನವೇ Lucknow Super Giants ತಂಡ ಮಹತ್ವದ ಬದಲಾವಣೆಗೆ ಮುಂದಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತನ್ನ ಅಧಿಕೃತ ಲೋಗೋವನ್ನು ಬದಲಿಸಿದ್ದು, ಅದಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಹಿಂದಿನ ಲೋಗೋದಲ್ಲಿ ರೆಕ್ಕೆಗಳ ನಡುವೆ ಬ್ಯಾಟ್ ಹಾಗೂ ಚೆಂಡಿನ ಚಿತ್ರಣವಿತ್ತು. ಇದೀಗ ಪರಿಚಯಿಸಲಾದ ಹೊಸ ಲೋಗೋ ಲಕ್ನೋ ಹಾಗೂ ಉತ್ತರ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಮೂರು ಪ್ರಮುಖ ಚಿಹ್ನೆಗಳನ್ನು ಒಳಗೊಂಡಿದೆ.
ಹೊಸ ಲೋಗೋದಲ್ಲಿರುವ ಎಡ ಮತ್ತು ಬಲ ಭಾಗದ ರೆಕ್ಕೆಗಳು ಗರುಡನನ್ನು ಪ್ರತಿನಿಧಿಸುತ್ತವೆ. ಮಧ್ಯಭಾಗದಲ್ಲಿರುವ ಕಿರೀಟವು ರಾಜತ್ವ, ಹೆಮ್ಮೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅದರ ಕೆಳಭಾಗದಲ್ಲಿರುವ ಆನೆ ಲಕ್ನೋ ತಂಡದೊಂದಿಗೆ ಗಣೇಶನ ಉಪಸ್ಥಿತಿಯನ್ನು ಹಾಗೂ ಪ್ರದೇಶದ ಬಲವನ್ನು ಸೂಚಿಸುತ್ತದೆ.
ಈ ಕುರಿತು ಆರ್‌ಪಿಎಸ್‌ಜಿ ಸಮೂಹದ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ ಮಾತನಾಡಿ, “ಹೊಸ ಲೋಗೋ ಇಡೀ ಲಕ್ನೋ ತಂಡದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಹದ್ದು ಹೊಸ ಎತ್ತರಗಳನ್ನು ತಲುಪುವ ಪ್ರೇರಣೆಯನ್ನು ನೀಡುತ್ತದೆ, ಕಿರೀಟ ತಂಡದ ದೃಢನಿಶ್ಚಯ ಮತ್ತು ಹೆಮ್ಮೆಯನ್ನು ತೋರಿಸುತ್ತದೆ, ಆನೆ ಪ್ರದೇಶದ ಶಕ್ತಿ ಹಾಗೂ ಸ್ಥೈರ್ಯವನ್ನು ಪ್ರತಿನಿಧಿಸುತ್ತದೆ” ಎಂದು ಹೇಳಿದ್ದಾರೆ.
೨೦೨೨ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಇನ್ನೂ ಒಂದೂ ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ೨೦೨೨ ಮತ್ತು ೨೦೨೩ರಲ್ಲಿ ಪ್ಲೇಆಫ್ ಹಂತ ತಲುಪಿದರೂ ಕಪ್ ಗೆಲ್ಲುವಲ್ಲಿ ವಿಫಲವಾಯಿತು. ಬಳಿಕ ೨೦೨೪ ಮತ್ತು ೨೦೨೫ರ ಐಪಿಎಲ್ ಸೀಸನ್‌ಗಳಲ್ಲಿ ತಂಡ ಏಳನೇ ಸ್ಥಾನದಲ್ಲೇ ಸ್ಪರ್ಧೆಯನ್ನು ಮುಗಿಸಿತು.
ಪ್ರಸ್ತುತ ಐಪಿಎಲ್‌ನ ಹತ್ತು ತಂಡಗಳ ಪೈಕಿ ಫೈನಲ್‌ಗೆ ಪ್ರವೇಶಿಸದ ಏಕೈಕ ತಂಡ ಲಕ್ನೋ ಸೂಪರ್ ಜೈಂಟ್ಸ್ ಆಗಿದೆ. ಹೊಸ ಲೋಗೋ ತಂಡದ ಅದೃಷ್ಟವನ್ನು ಬದಲಾಯಿಸಬಹುದೇ ಎಂಬುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.



