ರಾಯಚೂರು: ಜಿಲ್ಲೆಯ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ಅಂಗವಾಗಿ ಭಕ್ತನೊಬ್ಬರು ಕೋಟ್ಯಂತರ ರೂಪಾಯಿ ಮೌಲ್ಯದ ನವರತ್ನ ಕವಚವನ್ನು ಸಮರ್ಪಿಸಿದ್ದಾರೆ.
ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಿದ ನವರತ್ನ ಕವಚವನ್ನು ರಾಯರ ಮಠದ ೩೭ನೇ ಪೀಠಾಧಿಪತಿ ಸುಜಯೀಂದ್ರ ತೀರ್ಥರು ಅವರ ಮೂಲಬೃಂದಾವನಕ್ಕೆ ಅರ್ಪಿಸಲಾಗಿದೆ. ಗುರುವೈಭವೋತ್ಸವದ ವಿಶೇಷ ಸೇವೆಯಾಗಿ ಬೆಂಗಳೂರು ಮೂಲದ ಭಕ್ತ ಸಂಪತ್ ಕುಮಾರ್ ಅವರು ಈ ಕವಚವನ್ನು ಸಮರ್ಪಿಸಿದ್ದಾರೆ.
ಸ್ವಪ್ನ ಆದೇಶ ಹಾಗೂ ರಾಯರ ಮೇಲಿನ ಭಕ್ತಿಯಿಂದ ಈ ಸೇವೆಯನ್ನು ಸಲ್ಲಿಸುತ್ತಿರುವುದಾಗಿ ಭಕ್ತ ಸಂಪತ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಅವರು ಬೃಂದಾವನಕ್ಕೆ ಕವಚವನ್ನು ಸಮರ್ಪಿಸಿದರು.
ಇದರ ಜೊತೆಗೆ ಬ್ರಹ್ಮಕರಾರ್ಚಿತ ಮೂಲ ರಾಮದೇವರ ಮೂರ್ತಿಯ ಪೂಜೆಗೆ ರಜತ ಶೇಷವಾಹನ ಪೀಠವನ್ನೂ ಸಮರ್ಪಿಸಲಾಯಿತು. ಅನೇಕ ಭಕ್ತರು ಸೇವಾ ರೂಪದಲ್ಲಿ ರಜತ ಶೇಷವಾಹನ ಪೀಠವನ್ನು ಮಠಕ್ಕೆ ಅರ್ಪಿಸಿದರು.



