ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ವತಿಯಿಂದ ಗದಗ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿಗಳಿಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಅನ್ವರ ಬಾಗೇವಾಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಶಾದಿ ಮಹಲ್‌ಗಳು ಮೇಲುಸ್ತುವಾರಿ ನಡೆಸುತ್ತಿರುವ ಸಂಸ್ಥೆಗಳ ಸ್ವಂತ ಆಸ್ತಿಗಳಾಗಿಬಿಟ್ಟಿವೆ. ಇದರಿಂದ ಬಡ ಜನರಿಗೆ ತಮ್ಮ ಮಕ್ಕಳ ಮದುವೆ ಹಾಗೂ ಇತರೆ ಕಾರ್ಯಕ್ರಮಗಳನ್ನು ಮಾಡಬೇಕಾದಲ್ಲಿ ಸದರಿ ಹಾಲ್‌ಗಳಿಗೆ ಹೆಚ್ಚಿನ ಬಾಡಿಗೆ ಕೊಡಲು ಕಷ್ಟಕರವೆನಿಸುತ್ತಿದೆ. ಹಾಲ್‌ಗಳನ್ನು ನಿರ್ಮಿಸಿದ ಜಾಗ ಸರಕಾರಿ ಆಸ್ತಿಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಸಮುದಾಯದ ಏಳಿಗೆ/ಉನ್ನತಿಗಾಗಿ ಮೀಸಲಿಟ್ಟ ಹಣ ಖರ್ಚು ಮಾಡಿದೆ.
ಇಂತಹ ಮದುವೆ ಹಾಲ್‌ಗಳು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಿಗುವಂತೆ ಮಾಡಿಕೊಡಬೇಕೆಂದು ಅಲ್ಪಸಂಖ್ಯಾತರ ಕಲ್ಯಾಣ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಅಲ್ತಾಫ ಕೊಪ್ಪಳ, ಸದಸ್ಯರುಗಳಾದ ಮಹಮ್ಮದಸೋಹಿಲ್ ನಾರಾಯಣಕೇರಿ, ಹಿದಾಯತ ಕಾಗದಗಾರ, ಮೆಹಬೂಬ ಕದಡಿ, ಮೈನುದ್ದಿನ ಬಿಜಾಪುರ, ಸಮಾಜದ ಮುಖಂಡರಾದ ಹಾಜಿಅಲಿ ಕೊಪ್ಪಳ, ಸಮೀರ ತಾಂಬೊಲಿ, ಜಿಲಾನಿ ಖಾಜಿ ಮುಂತಾದವರಿದ್ದರು.



