ವಿಜಯಸಾಕ್ಷಿ ಸುದ್ದಿ, ಗದಗ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥರನ್ನು ನಗರದ ಪ್ರವಾಸಿ ಮಂದಿರದಲ್ಲಿ ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗದಗ ಜಿಲ್ಲಾ ಗುತ್ತಿಗೆದಾರರು ನನಗೆ ತೋರಿದ ಪ್ರೀತಿ, ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ. ಇವತ್ತು ಗುತ್ತಿಗೆದಾರರು ಬಹಳ ಆರ್ಥಿಕ ತೊಂದರೆಯಲ್ಲಿ ಸಿಲುಕಿಕೊಂಡಿದ್ದೇವೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಗುತ್ತಿಗೆದಾರರಿಗೆ ಸುಮಾರು 37 ಸಾವಿರ ಕೋಟಿ ರೂಪಾಯಿ ಹಣ ಬಾಕಿ ಉಳಿದಿದ್ದು, ಇಂದು ಅನೇಕ ಗುತ್ತಿಗೆದಾರರು ತಮ್ಮ ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದ್ದಾರೆ. ಈಗ ಅದರ ಬಡ್ಡಿ ಕಟ್ಟುತ್ತಿದ್ದಾರೆ. ನಮಗೆ ಯಾವುದೇ ರಾಜಕೀಯ ಪಕ್ಷದ ಒಲವು ಇಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಥವಾ ಇತರೆ ಯಾವುದೇ ಪಕ್ಷಗಳನ್ನು ನಾವು ಹೊಗಳುವುದಿಲ್ಲ, ದೂಷಿಸುವುದಿಲ್ಲ ಎಂದು ಹೇಳಿದರು.
ಸರ್ಕಾರಗಳು ನೀಡಿದ ಕೆಲಸಗಳನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ. ರಾಜ್ಯ ಸರ್ಕಾರ ಆದಷ್ಟು ಬೇಗ ನಮ್ಮ ಬಾಕಿ ಹಣವನ್ನು ಕೊಟ್ಟು ಗುತ್ತಿಗೆದಾರರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ. ದಿನಕಳೆದಂತೆ ಗುತ್ತಿಗೆದಾರರ ಆರ್ಥಿಕ ಸಂಕಷ್ಟ ದೊಡ್ಡ ಪ್ರಮಾಣದಲ್ಲಿ ಆಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಸರ್ಕಾರದ ವಿವಿಧ ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ಗುತ್ತಿಗೆದಾರರ ಹಣವನ್ನು ಪಾವತಿಸುವಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿದ್ದು ಪಾಟೀಲ, ವಿ.ಜಿ. ಮುಲ್ಕಿಪಾಟೀಲ, ಏ.ಬಿ. ಕಟಗಿ, ಆರ್.ಡಿ. ರಂಗಪ್ಪನವರ್, ಬಿ.ವಾಯ್. ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಎ.ಎಚ್. ಪಾಟೀಲ, ಬಿ.ಆರ್. ಹೊಸಮನಿ, ಬಸವರಡ್ಡಿ ಹಂಚಿನಾಳ, ಅನ್ನಪ್ಪ ದಾರಿಯನ್ನವರ, ಸಿ.ಎಸ್. ನಾಗಾವಿ, ಎಂ.ಎಸ್. ಮಾದನ್ನವರ, ಯುವರಾಜ ಬಳ್ಳಾರಿ, ವಿಶ್ವನಾಥ ಪಾಟೀಲ, ಬೆಳಹುಣಸಿ, ಹೊಸಂಗಡಿ, ಗುರನ್ನ ಕುರ್ತಕೋಟಿ, ದಾಯಮ್ಮನವರ, ಎಮ್.ವ್ಹಿ. ಗಾಣಿಗೇರ, ಎಸ್.ಎಚ್. ಪಾಟೀಲ್, ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



